ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕ ವಿಳಂಬ: ಆದೇಶದ ಗೆಜೆಟ್, ಸ್ಥಳ ನಿಯುಕ್ತಿಗೆ ಆಗ್ರಹಿಸಿ ಅಭ್ಯರ್ಥಿಗಳ ಧರಣಿ

Update: 2024-06-10 16:14 GMT

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿ-2021ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿಯ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವೇಳಾಪಟ್ಟಿಯನ್ನು ಹೊರಡಿಸುವಂತೆ ಆಗ್ರಹಿಸಿ ಅಭ್ಯರ್ಥಿಗಳು ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದಾರೆ.

ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯನ್ನು ಸರಕಾರವು 2023ರ ನವೆಂಬರ್ 4ರಂದು ವಿಶೇಷ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿತ್ತು. ಆದರೆ, ಅದರ ನೇಮಕಾತಿ ಆದೇಶದ ಗೆಜೆಟ್ ಮತ್ತು ಸ್ಥಳ ನಿಯುಕ್ತಿಯ ವಿಳಂಬವಾಗಿದ್ದು, ಇದರನ್ನು ಖಂಡಿಸಿರುವ ಅಭ್ಯರ್ಥಿಗಳು ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ನೇಮಕಾತಿ ಆದೇಶವನ್ನು ಇಲಾಖೆ ಹಿಂಪಡೆದಿತ್ತು. ಇದೀಗ ಕೇಂದ್ರದಲ್ಲಿ ಹೊಸ ಸರಕಾರ ರಚನೆಯಾದರೂ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜತೆಗೆ ಮುನ್ಸೂಚನೆಯನ್ನೂ ನೀಡಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಕಮಿಷನರ್ ಈವರೆಗೂ ಭೇಟಿ ಮಾಡಲಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ.

ಮುಖ್ಯ ಆಡಳಿತ ಅಧಿಕಾರಿಗಳು ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವಂತೆ ಬೆದರಿಕೆಯನ್ನು ಹಾಕುತ್ತಿದ್ದಾರೆ. ಆದರೂ ಕೂಡಾ ಮಳೆ ಬರುತ್ತಿದ್ದರೂ ನೂರಾರು ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ನೆರೆದಿದ್ದೇವೆ. ಆದೇಶ ಪ್ರತಿ ಗೆಜೆಟ್ ಆಗಲಿ, ಈಗಲೇ ಪ್ರತಿಭಟನೆ ಹಿಂಪಡೆಯುತ್ತೇವೆ ಎಂದು ಧರಣಿ ನಿರತರು ಪಟ್ಟು ಹಿಡಿದಿದ್ದಾರೆ.

‘ನಾವು ನ್ಯಾಯವನ್ನು ಕೇಳಲು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಧರಣಿ ನಿಲ್ಲಿಸುವಂತೆ ಪೊಲೀಸರನ್ನು ಮುಂದಿಟ್ಟು ಬೆದರಿಕೆ ಹಾಕಿಸುದ್ದಾರೆ. ಆದರೆ, ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಮಳೆಯ ನಡುವೆಯೂ ನೂರಾರು ಅಭ್ಯರ್ಥಿಗಳು ಹೋರಾಡುತ್ತಿದ್ದೇವೆ’

-ತಿಲಕ್ ಡಿ.ಎಂ., ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News