‘ಕಾವೇರಿ’ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯದ ಪರಂಪರೆ ಇದೆ : ದಿನೇಶ್ ಅಮಿನ್ ಮಟ್ಟು

Update: 2024-06-16 15:38 GMT

ಬೆಂಗಳೂರು: ಕಾವೇರಿ ನದಿ ನೀರಿನ ವಿಷಯದಲ್ಲಿ 1924ರ ಒಪ್ಪಂದದ ಮೂಲಕ ಕರ್ನಾಟಕದ ಮೇಲೆ ಒತ್ತಡ ಹೇರಿ ಅಲ್ಲಿಂದ ಇಲ್ಲಿಯ ವರೆಗೆ ಅನ್ಯಾಯದ ಪರಂಪರೆ ಮುಂದುವರಿಯುತ್ತಲೇ ಬಂದಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್‍ಮಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕಾಡುಮಲ್ಲೇಶ್ವರ ಗೆಳೆಯರ ಬಳಗ, ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿ, ಗಾಂಧಿ ಭವನದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಸಿ.ಚಂದ್ರಶೇಖರ್ ಅವರು ಬರೆದಿರುವ ‘ಕಾವೇರಿ ವಿವಾದ-ಒಂದು ಐತಿಹಾಸಿಕ ಹಿನ್ನೋಟ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿಯಲ್ಲಿರುವುದು ಕಡಿಮೆ ಪ್ರಮಾಣದ ನೀರು ಅದನ್ನ ಸಮರ್ಪಕವಾಗಿ ಹಂಚಿಕೆ ಮಾಡಿಕೊಳ್ಳಬೇಕಿದೆ. ಕಾವೇರಿ ನ್ಯಾಯ ಮಂಡಳಿಯಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ನಾರಿಮನ್ ಅವರು ಸುಪ್ರೀಂಕೋರ್ಟ್‍ನಲ್ಲಿ ಅನ್ಯಾಯದ ಪ್ರಮಾಣವನ್ನು ಕಡಿಮೆಗೊಳಿಸಿದ್ದಾರೆ ಎಂದು ಹೇಳಿದರು.

ನೆಲ, ಜಲ, ಭಾಷೆಯ ಸಮಸ್ಯೆಯನ್ನು ಬಗೆಹರಿಸುವ ಜವಾಬ್ಧಾರಿಯನ್ನು ಕೇವಲ ರಾಜಕಾರಣಿಗಳ ತಲೆಗೆ ಕಟ್ಟಿರುವುದರಿಂದ ಕಾವೇರಿ ವಿವಾದ ಸಮಸ್ಯೆ ಇದುವರೆಗೂ ಬಗೆಹರಿಯುತ್ತಿಲ್ಲ. ರಾಜಕಾರಣಿಗಳು ಮಾತನಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೋರಾಟವನ್ನು ಆಯಾ ಕ್ಷೇತ್ರದ ಹೋರಾಟಗಾರರಿಗೆ ಅಷ್ಟೇ ಮೀಸಲಿಡದೇ ಎಲ್ಲರೂ ಹೋರಾಟ ಮಾಡಬೇಕಿದೆ. ಅದಕ್ಕಾಗಿ ನಾಡಿನ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕಲಾವಿದರು ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟರು.

‘ನೀರನ್ನು ಮಂತ್ರದಿಂದ ಸೃಷ್ಟಿಸಲು ಸಾಧ್ಯವಿಲ್ಲ’ ಕಾವೇರಿ ಅಂತಿಮ ತೀರ್ಪು ಬಂದಾಗ ನಮಗೆ ಕೆಲವು ಅನುಕೂಲವಾದವೂ 10.3-4 ಲಕ್ಷ ಎಕರೆಗಿಂತ ಜಾಸ್ತಿ ನೀರಾವರಿ ಮಾಡಬಾರದು ಎಂಬ ನಿಬಂಧನೆಯನ್ನು ಕೈಬಿಟ್ಟು 18ಲಕ್ಷ ಎಕರೆ ವರೆಗೆ ನೀರಾವರಿ ಮಾಡಲು ಅವಕಾಶ ಮಾಡಿಕೊಡಲಾಯಿತು. 285 ಟಿಎಂಸಿ ನೀರು ಬಿಟ್ಟು, 1924ರ ಒಪ್ಪಂದದಿಂದ ಬಿಡುಗಡೆಗೊಳಿಸಲಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ಬೋರಯ್ಯ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೊಜ ವೂಡೆ ಪಿ.ಕೃಷ್ಣ, ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಮ್, ನಿವೃತ್ತ ಐಪಿಎಸ್ ಅಧಿಕಾರಿ ಸಿ.ಚಂದ್ರಶೇಖರ್, ಪ್ರಕಾಶಕ ಅಭಿರುಚಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

‘ಕೆಲ ಮಟ್ಟಿಗೆ ನೀರಿನ ಸಮಸ್ಯೆಯನ್ನು ಕಡಿಮೆಗೊಳಸಲು ಮೇಕೆದಾಟು ಯೋಜನೆ ರೂಪಿಸಲು ರಾಜ್ಯಾದ್ಯಂತ ಹೋರಾಟ ಮಾಡಬೇಕು. ಮೆಟ್ಟೂರು ಆಣೆಕಟ್ಟೆ ಮತ್ತು ಸ್ಟ್ಯಾನ್ಲಿ ಜಲಾಶಯದಲ್ಲಿ ಹೂಳು ತುಂಬಿದ್ದು, ನೀರಿನ ಸಂಗ್ರಹ ಕಡಿಮೆಯಾಗಿದೆ. ಅದರ ಹೂಳೆತ್ತುವ ಕೆಲಸವಾಗಬೇಕು. ಜತೆಗೆ ಕಾಲುವೆಗಳ ಅಭಿವೃದ್ಧಿ ಮಾಡಿ ಇರುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತಿಸಬೇಕು ಎಂದು ದಿನೇಶ್ ಅಮಿನ್‍ಮಟ್ಟು ಹೇಳಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ: ನ್ಯಾ.ಗೋಪಾಲಗೌಡ

‘ಕಾವೇರಿ ಒಪ್ಪಂದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು, ನ್ಯಾಯ ಮಂಡಳಿ ಸದಸ್ಯರ ಆಯ್ಕೆಯಲ್ಲೂ ನ್ಯಾಯ ಸಿಗಲಿಲ್ಲ. ಬೆಳವಣಿಗೆಯಾಗುತ್ತಿರುವ ಜನಸಂಖ್ಯೆ, ಕಡಿಮೆ ಮಳೆ ಪ್ರಮಾಣ, ಪರಿಸರ ಬದಲಾವಣೆಯಿಂದ ರಾಜ್ಯ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವು ವಿಚಾರಗಳಲ್ಲಿ ರಾಜ್ಯದಿಂದ ಪ್ರಬಲ ವಾದ ಮಂಡನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ತಿಳಿಸಿದ್ದಾರೆ.

ನಗರದ ಗಾಂಧಿ ಭವನದಲ್ಲಿ ನಡೆದ ಕಾವೇರಿ ವಿವಾದ ಒಂದು ಐತಿಹಾಸಿಕ ಹಿನ್ನೋಟ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರದಿಂದ ರಾಜ್ಯಕ್ಕೆ ನ್ಯಾಯ ಸಿಗುತ್ತಿಲ್ಲ. ಒಂದು ಪ್ಲೇಟ್ ಇಡ್ಲಿ ತಿಂದರೂ ಕೂಡ ಜಿಎಸ್‍ಟಿ ಪಾವತಿಸುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಬರಗಾಲ ಬಂದಾಗ ಕೇಂದ್ರ ಸರಕಾರ ಸಕಾಲಕ್ಕೆ ಅನುದಾನ ಕೊಡಲಿಲ್ಲ. ಆದರೆ ಭಾರತ ಚೆನ್ನಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಬೇರೆ ದೇಶದಲ್ಲಿ ಕೊಚ್ಚಿಕೊಳ್ಳುವುದು ಮಾತ್ರ ಕಡಿಮೆಯಾಗಿಲ್ಲ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News