ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಅಗತ್ಯ : ದಿನೇಶ್ ಅಮೀನ್‌ಮಟ್ಟು
ಬೆಂಗಳೂರು : ಕೋಮುವಾದ, ಬಂಡವಾಳಶಾಹಿವಾದ, ಬ್ರಾಹ್ಮಣವಾದದ ವಿರುದ್ಧ ಬೃಹತ್ ಹೋರಾಟ ಕಟ್ಟದಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ. ದಲಿತರಿಗೆ ಸಿಗಬೇಕಾದ ಎಲ್ಲ ಸವಲತ್ತು ಸಿಗಬೇಕಾದರೆ ದಲಿತರಿಗೆ ಪ್ರತ್ಯೇಕ ಮತ ಕ್ಷೇತ್ರ ಸ್ಥಾಪಿಸುವುದು ಅವಶ್ಯವಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಗಾಂಧಿ ಭವನದಲ್ಲಿ ದಸಂಸ (ಅಂಬೇಡ್ಕರ್‌ವಾದ) ಆಯೋಜಿಸಿದ್ದ ‘ದಲಿತ ಚಳವಳಿ ಮತ್ತು ಸಮಕಾಲೀನ ಕರ್ನಾಟಕ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಎಸ್‌ಸಿಪಿ, ಟಿಎಸ್‌ಪಿಯು ಸಮಕಾಲೀನ ಕರ್ನಾಟಕದ ಚರ್ಚೆಯ ವಿಷಯವಾಗಿದ್ದು, ಕಾಯ್ದೆಯ 7ಡಿಯನ್ನು ರದ್ದುಗೊಳಿಸಲಾಯಿತು. ಒಂದು ವೇಳೆ ಈ ಕಾಯ್ದೆ ಬರದೇ ಇದ್ದರೆ, ಕೇಂದ್ರ ಸರಕಾರದ ಮಟ್ಟದಲ್ಲಿ ಮತ್ತು ಬೇರೆ ರಾಜ್ಯದಲ್ಲಿ ಏನಾಗುತಿತ್ತು. ಎಂಬುದನ್ನು ನಾವು ನೋಡಬೇಕು ಎಂದು ಹೇಳಿದರು.
2013-14ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 8,616 ಕೋಟಿ ರೂ.ಅನುದಾನವನ್ನು ನೀಡಲಾಗಿತ್ತು. ಆಗ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯಿರಲಿಲ್ಲ. ಎಸ್‌ಸಿಪಿ, ಟಿಎಸ್‌ಪಿ ಜಾರಿಗೆ ಬಂದ ಮೇಲೆ 15,894 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ವರ್ಷ 39ಸಾವಿರ ಕೋಟಿ ರೂ. ಅನುದಾನ ದಲಿತರಿಗಾಗಿ ನೀಡಲಾಗಿದೆ. ಒಂದು ವೇಳೆ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಇಲ್ಲದಿದ್ದರೆ ಸಿಗುವ ಅನುದಾನದಲ್ಲಿ ಅರ್ಧದಷ್ಟು ಕಡಿಮೆ ಇರುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.
ಈಗ ಪ್ರಶ್ನೆಯಿರುವುದು, ದಲಿತರ ಅನುದಾನವನ್ನು ಬೇರೆ ಯೋಜನೆಗೆ ಬಳಸಲಾಗಿದೆ ಎನ್ನುವ ಆರೋಪವಿದೆ. ದಲಿತ ಚಳವಳಿಯ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಒಂದೇ ವರ್ಷಕ್ಕೆ ಸರಕಾರ ದಲಿತ ನಿಜವಾದ ವಿರೋಧಿಯಾಗಿದ್ದರೆ ಅದನ್ನು ವಿರೋಧಿಸೊಣ ಎಂದು ಅವರು ಹೇಳಿದರು.
'7' ಡಿ ಬಂದ ಮೇಲೆ ಅದನ್ನು ರದ್ದುಗೊಳಿಸಲು ಸಾಕಷ್ಟು ಹೋರಾಟ ಮಾಡಲಾಗಿದೆ. ಈಗ ಅದನ್ನು ರದ್ದುಗೊಳಿಸಲಾಗಿದೆ. 7ಸಿಯಿಂದ ಗ್ಯಾರಂಟಿಗಳಿಗೆ ಹಣ ನೀಡಲಾಗಿದೆ ಎಂಬುದು ಆರೋಪ ಇದೆ. ಯಾವುದೇ ಸಾಮಾನ್ಯ ಯೋಜನೆಗಳು ಎಸ್‌ಸಿ, ಎಸ್‌ಟಿಯವರಿಗೆ ಉಪಯೋಗವಾಗುತ್ತಿದ್ದರೆ, ಆ ಯೋಜನೆಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಎಸ್‌ಸಿ ಎಸ್‌ಟಿ ಜನಸಂಖ್ಯೆ ಆಧಾರದಲ್ಲಿ ನೀಡಬಹುದು ಎಂಬುದು ಕಾನೂನಿನಲ್ಲಿ ಅವಕಾಶವಿದೆ. ಕೇಂದ್ರ ಸರಕಾರದ ಯೋಜನೆಗಳಿಗೂ ಈ ಹಣ ನೀಡಲಾಗಿದೆ. ಅದಕ್ಕಾಗಿ 7ಸಿಯನ್ನು ರದ್ದುಗೊಳಿಸಬೇಕು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.
ಆದರೆ, ಶಕ್ತಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಅನುದಾನ ನೀಡಿರುವುದು ಅನ್ಯಾಯವಾಗಿದೆ. ಯಾಕೆಂದರೆ ಶಕ್ತಿ ಯೋಜನೆಯಡಿಯಲ್ಲಿ ಎಷ್ಟು ಜನ ಎಸ್‌ಸಿ, ಎಸ್‌ಟಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಅಮೀನ್‌ಮಟ್ಟು ತಿಳಿಸಿದರು.
‘ದಲಿತರ ನಿಧಿಗೆ ಕನ್ನ ಹಾಕುತ್ತಿದ್ದಾರೆಂದು ಬಿಜೆಪಿಯವರೂ ಹೇಳುತ್ತಿದ್ದಾರೆ. ಯಾವತ್ತೂ ಬಿಜೆಪಿ ದಲಿತರ ಪರವಾದ ಯಾವ ನಿರ್ಧಾರ ಮಾಡಿದ ಉದಾಹರಣೆ ಇಲ್ಲ. ಕೇಂದ್ರ ಸರಕಾರದ ಬಜೆಟ್ 45ಲಕ್ಷ ಕೋಟಿ ರೂ. ಅದರಲ್ಲಿ ದಲಿತರಿಗಾಗಿ ಕೇವಲ 2.50ಲಕ್ಷ ಕೋಟಿ ರೂ.ಕೊಡುತ್ತಿದೆ. ಆದರೆ ರಾಜ್ಯ ಸರಕಾರ ಶೇ.25ರಷ್ಟು ನೀಡುತ್ತಿದೆ. ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಹೋಗುತ್ತಿದೆ. ಅದಕ್ಕಾಗಿ ರಾಷ್ಟಮಟ್ಟದಲ್ಲಿ ಎಸ್‌ಸಿಪಿ, ಟಿಎಸ್‌ಪಿಯನ್ನು ಜಾರಿಗೊಳಿಸಬೇಕು’ ಎಂದು ಹೇಳಿದರು.