‘ಎನ್‍ಎಚ್‍ಎಂ ಸಿಬ್ಬಂದಿ’ ಖಾಯಂಗೊಳಿಸಲು ಅವಕಾಶವಿಲ್ಲ: ದಿನೇಶ್ ಗುಂಡೂರಾವ್

Update: 2025-03-06 22:43 IST
‘ಎನ್‍ಎಚ್‍ಎಂ ಸಿಬ್ಬಂದಿ’ ಖಾಯಂಗೊಳಿಸಲು ಅವಕಾಶವಿಲ್ಲ: ದಿನೇಶ್ ಗುಂಡೂರಾವ್
  • whatsapp icon

ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಅಭಿಯಾನವು(ಎನ್‍ಎಚ್‍ಎಂ) ಕೇಂದ್ರ ಸರಕಾರದ ಯೋಜನೆಯಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎನ್‍ಎಚ್‍ಎಂ ಸಿಬ್ಬಂದಿಯನ್ನು ರಾಜ್ಯದಲ್ಲಿ ಜಾರಿಯಲ್ಲಿರುವ ಸೇವಾ ನಿಯಮಗಳಂತೆ ಖಾಯಂಗೊಳಿಸಲು ಅವಕಾಶವಿರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಎಸ್.ವಿ.ಸಂಕನೂರ ಎನ್‍ಎಚ್‍ಎಂ ಯೋಜನೆ ಅಡಿ 19 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಲ್ಯಾಬ್ ಟೆಕ್ನಿಷಿಯನ್, ಸ್ಟಾಫ್ ನರ್ಸ್ ಹಾಗೂ ಆಯುಷ್‌ ವೈದ್ಯರನ್ನು ಖಾಯಂಗೊಳಿಸುವ ಬಗ್ಗೆ ನಿಯಮ 330ರಲ್ಲಿ ಕೋರಿರುವ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಯಂಗೊಳಿಸಲು, 2022-23ನೆ ಸಾಲಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಸರಕಾರವು ಮನವಿಯನ್ನು ಪರಿಗಣಿಸಿ 2023ರ ಎ.1ರಿಂದ ಜಾರಿಗೆ ಬರುವಂತೆ ಶೇ 15ರಷ್ಟು ವೇತನ ಹೆಚ್ಚಿಸಿ ಆದೇಶಿಸಿದೆ ಎಂದು ಸಚಿವ ದಿನೇಶ್ ಗುಂಡುರಾವ್ ಹೇಳಿದರು.

ಎನ್‍ಎಚ್‍ಎಂ ಅಡಿಯಲ್ಲಿ 1,432 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳು ಮಂಜೂರಾಗಿದ್ದು, 1,383 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 9,047 ಸ್ಮಾಫ್ ನರ್ಸ್ ಹುದ್ದೆಗಳು ಮಂಜೂರಾಗಿದ್ದು, 7,858 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 1,539 ಆಯುಷ್ ವೈದ್ಯರ ಹುದ್ದೆ ಮಂಜೂರಾಗಿದ್ದು, 1,472 ಮಂದಿ ಕಾರ್ಯನಿರ್ವಸುತ್ತಿದ್ದಾರೆ. ಒಟ್ಟು 24,507 ಒಳಗುತ್ತಿಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಾರ್ಯಕ್ಷಮತೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೈಗೊಂಡು ಎನ್‍ಎಚ್‍ಎಂ ಸಿಬ್ಬಂದಿಯ ಸೇವೆಯು ತೃಪ್ತಿಕರವಾಗಿದ್ದಲ್ಲಿ, ಸಿಬ್ಬಂದಿಯನ್ನು ಮುಂದಿನ ಅರ್ಥಿಕ ವರ್ಷಕ್ಕೆ ನಿಯಮಾನುಸಾರ ಷರತ್ತುಗಳನ್ವಯ ಪ್ರತಿ ವರ್ಷ ಮುಂದುವರೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಎನ್‍ಎಚ್‍ಎಂ ಗುತ್ತಿಗೆ ನೌಕರರಿಗೆ ಈಗಾಗಲೇ ನಮ್ಮ ಸರಕಾರ ವಿಮಾ ಕವಚ ಯೋಜನೆ ಜಾರಿಗೊಳಿಸಿದೆ. ಇತರ ಇಲಾಖೆಗಳ ಗುತ್ತಿಗೆ ನೌಕರರ ಖಾಯಂಯಾತಿ ಬಗ್ಗೆ ಸರಕಾರವು ಸಕರಾತ್ಮಕ ನಿರ್ಣಯ ತೆಗೆದುಕೊಂಡಾಗ, ಅದನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರಿಗೂ ವಿಸ್ತರಿಸಲಾಗುವುದು ಎಂದು ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News