ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು : ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

Update: 2024-01-30 13:40 GMT
ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು : ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್
  • whatsapp icon

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳಿಗೆ ತಿಳುವಳಿಕೆ ಪತ್ರ ನೀಡಿದ ಏಳು ದಿನಗಳ ಬಳಿಕವೂ ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಅಂತಹ ಮಳಿಗೆಯ ಮೇಲೆ ಶಿಸ್ತು ಕ್ರಮ ಜರುಗಿಸಿ ಕೂಡಲೆ ನಾಮಫಲಕ ಅಳವಡಿಸುವಂತೆ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 49,241 ಮಳಿಗೆಗಳಿಗೆ ನೋಟಿಸ್ ನೀಡಲಾಗಿದ್ದು, 16,813 ಮಳಿಗೆಗಳು ಶೇ.60ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲಾಗಿದೆ. 32,428 ಮಳಿಗೆಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕಿದೆ. ಪೆಬ್ರವರಿ ಅಂತ್ಯದೊಳಗಾಗಿ ಎಲ್ಲ ಮಳಿಗೆಗಳಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಿಕೊಂಡಿರಬೇಕು. ಅದಕ್ಕಾಗಿ ಆಯಾ ವಲಯಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಹಾಯ 2.0ರಲ್ಲಿ ಬರುವ ದೂರುಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ: ಪಾಲಿಕೆಯ ಸಹಾಯ 2.0ರಲ್ಲಿ ಬರುವ ದೂರುಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥಪಡಿಸಬೇಕು. ದೂರುಗಳು ಬಂದ ತಕ್ಷಣ ಬಗೆಹರಿಸಬಹುದಾದ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕಸದ ಸಮಸ್ಯೆ, ಬೀದಿ ದೀಪಗಳ ಅಳವಡಿಕೆ ಹಾಗೂ ರಸ್ತೆ ಗುಂಡಿ ಸಮಸ್ಯೆಗಳ ಕುರಿತು ದೂರುಗಳು ಬರುತ್ತವೆ. ಬರುವಂತಹ ದೂರುಗಳನ್ನು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಅವರು ಪಾಲಿಕೆಯ ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು, ಉಪ ಆಯುಕ್ತ ಮಂಜುನಾಥ ಸ್ವಾಮಿ, ಕಂದಾಯ ವಿಭಾಗದ ಜಂಟಿ ಆಯುಕ್ತೆ ಲಕ್ಷ್ಮಿದೇವಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News