ಬಿಜೆಪಿಯವರಂತೆ ಸರಕಾರಿ ಆಸ್ತಿಗಳನ್ನು ಅಡಮಾನ ಇಡುತ್ತಿಲ್ಲ : ಡಿ.ಕೆ.ಶಿವಕುಮಾರ್

Update: 2024-06-22 14:33 GMT

ಬೆಂಗಳೂರು : ರಾಜ್ಯ ಸರಕಾರ ಸಂಪನ್ಮೂಲ ಕ್ರೂಢೀಕರಣಗಳತ್ತ ಹೆಚ್ಚು ಗಮನಹರಿಸುತ್ತಿದ್ದು, ಬಿಜೆಪಿಯವರಂತೆ ಹಣಕಾಸಿಗಾಗಿ ಸರಕಾರಿ ಆಸ್ತಿಗಳನ್ನು ಅಡಮಾನ ಇಡುತ್ತಿಲ್ಲ. ಸರಕಾರದ ಹಾಗೂ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯ ಸರಕಾರ ಆದಾಯ ಮೂಲಗಳ ಕುರಿತು ಸಲಹೆಗೆ ವಿದೇಶಿ ಕಂಪೆನಿಗಳನ್ನು ನೇಮಿಸಿರುವ ಬಗ್ಗೆ ಬಿಜೆಪಿ ಮಾಡಿರುವ ಟೀಕೆ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರಕಾರ ಹಾಗೂ ಬೇರೆ ರಾಜ್ಯ ಸರಕಾರಗಳಂತೆ ನಾವು ಕೂಡ ಆದಾಯದ ಮೂಲಗಳ ಬಗ್ಗೆ ಖಾಸಗಿ ಕಂಪೆನಿಗಳ ಸಲಹೆ ಕೇಳಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ತಿರುಗೇಟು ನೀಡಿದರು.

ಚನ್ನಪಟ್ಟಣದಲ್ಲಿ ನೀವೆ ಸ್ಪರ್ಧೆ ಮಾಡುವಂತೆ ಜನ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಚನ್ನಪಟ್ಟಣ ನನ್ನ ಊರು. ಅಲ್ಲಿ ಯಾರೇ ನಿಂತರೂ ನಾನೇ ಅಭ್ಯರ್ಥಿ. ಯಾರು ಏನೇ ಅಭಿಪ್ರಾಯ ಹೇಳಲಿ. ಜನರ ಜತೆ ಚರ್ಚೆ ಮಾಡಿದ ಬಳಿಕ ನನ್ನ ಅಭಿಪ್ರಾಯ ತೀರ್ಮಾನಿಸುತ್ತೇನೆ ಎಂದರು.

ಗ್ಯಾರಂಟಿಯಿಂದ ಬೆಲೆ ಏರಿಕೆ ಮಾಡಿಲ್ಲ: ಬೆಲೆ ಏರಿಕೆಗೆ ಗ್ಯಾರಂಟಿ ಯೋಜನೆಗಳೆ ಕಾರಣ ಎಂದು ಎನ್‍ಡಿಎ ಮೈತ್ರಿಕೂಟದ ಸಂಸದರು ಮಾಡುತ್ತಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಯಾರು ಏನಾದರೂ ಆರೋಪ ಮಾಡಲಿ. ಗ್ಯಾರಂಟಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಕಾಲಕಾಲಕ್ಕೆ ಆಗಬೇಕಿರುವ ಬೆಲೆ ಏರಿಕೆ ನಾವು ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ನಾವು ಬಿಜೆಪಿಯವರಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿಲ್ಲ. ಬಿಜೆಪಿ ಕಚ್ಛಾತೈಲ ಬೆಲೆ ಕುಸಿದಾಗಲೂ ಬೆಲೆ ಏರಿಕೆ ಮಾಡಿದೆ. ನಾವು ಬಹಳ ಕಡಿಮೆ ಪ್ರಮಾಣದಲ್ಲಿ ನೆರೆ ರಾಜ್ಯಗಳ ಬೆಲೆ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಇಂಧನ ತೈಲ ಬೆಲೆ ಏರಿಕೆ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳು ಮುಂದುವರಿಯಲಿದೆ. ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೋ ಆ ಕೆಲಸ ಮಾಡುತ್ತೇವೆ ಎಂದು ಶಿವಕುಮಾರ್ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, ‘ಅವರ ಕುಟುಂಬದಲ್ಲಿ ದೊಡ್ಡವರಿದ್ದಾರೆ. ಅವರು ಉತ್ತರ ನೀಡುತ್ತಾರೆ. ನಮಗೆ ಆ ವಿಚಾರ ಬೇಡ’ ಎಂದರು.

ಮಾಜಿ ಮೇಯರ್ ಗಳ ಸಮಿತಿ ರಚನೆ: ಇಂದು ಮಾಜಿ ಮೇಯರ್ ಹಾಗೂ ಉಪಮೇಯರ್ ಗಳ ಜತೆ ಸಭೆ ಮಾಡಿ ಬೆಂಗಳೂರಿನ ಆಚಾರ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಮ್ಮ ನಾಯಕರ ಅಭಿಪ್ರಾಯ ಕೇಳಿದ್ದೇವೆ. ಬಿಬಿಎಂಪಿ ಚುನಾವಣೆ ತಯಾರಿ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಮಾಜಿ ಮೇಯರ್ ಗಳ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಎ ಖಾತೆ, ಬಿ ಖಾತೆ ಸೇರಿದಂತೆ ಅನೇಕ ಸಾರ್ವಜನಿಕ ಸಮಸ್ಯೆಗಳು ಹಾಗೂ ಆಡಳಿತಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಈ ಸಮಿತಿ ಅಧ್ಯಯನ ಮಾಡಿ ವರದಿ ನೀಡಲಿದೆ. ಮುಂದಿನ ಎಂಟು ಹತ್ತು ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡುತ್ತೇವೆ. ಸಮಿತಿ ವರದಿ ಮೇಲೆ ಮುಖ್ಯಮಂತ್ರಿ ಹಾಗೂ ಶಾಸಕರ ಜತೆ ಚರ್ಚೆ ಮಾಡುತ್ತೇವೆ. ನಂತರ ನಮ್ಮ ಕಾರ್ಯಯೋಜನೆ ರೂಪಿಸುತ್ತೇವೆ. ಬಿಬಿಎಂಪಿಗೆ ಚುನಾವಣೆ ಮಾಡಲೇಬೇಕು. ಅದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News