ಆ.16ರಿಂದ ಯುವ ಕಾಂಗ್ರೆಸ್ ಸದಸ್ಯತ್ವ ನೋಂದಣಿ, ಆಂತರಿಕ ಚುನಾವಣೆ : ಡಿ.ಕೆ.ಶಿವಕುಮಾರ್

Update: 2024-07-26 13:47 GMT

PC : x/@DKShivakumar

ಬೆಂಗಳೂರು: ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್‍ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಜು.24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣ ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿ ಮಾಡಿರಲಿಲ್ಲ. ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ಮಾಡಲಾಗುವುದು ಎಂದರು.

ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.

ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೂ ಮಾಡಲಾಗುವುದು. ಯುವ ಕಾಂಗ್ರೆಸ್ ಸದಸ್ಯರಾಗಲು ಬಯಸುವವರು ಆನ್‍ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಆನ್‍ಲೈನ್ ಸದಸ್ಯತ್ವ ಪಡೆದವರಿಗೆ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡುವ ಅಧಿಕಾರ ಸಿಗಲಿದೆ ಎಂದು ಶಿವಕುಮಾರ್ ತಿಳಿಸಿದರು.

ಒಬ್ಬ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ. ರಾಜ್ಯಾಧ್ಯಕ್ಷ, ರಾಜ್ಯ ಮಟ್ಟದ ಪದಾಧಿಕಾರಿ, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಗೆ ಮತ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆಪ್‍ನಲ್ಲಿ ವೀಕ್ಷಿಸಬಹುದು ಎಂದು ಶಿವಕುಮಾರ್ ಹೇಳಿದರು.

ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು 35 ವರ್ಷ ದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿಗೆ ಶುಲ್ಕ 50 ರೂಪಾಯಿ ಕಟ್ಟಬೇಕು. ಅವರಿಗೆ ಗುರುತಿನ ಚೀಟಿ ನೀಡಲಾಗುವುದು. ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಚುನಾವಣೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುವುದು. ಸದಸ್ಯತ್ವ ನೋಂದಣಿ ಸಮಯದಲ್ಲಿ ಸದಸ್ಯತ್ವ ಪಡೆಯುವವರ ಮುಖಚರ್ಯೆಯನ್ನು ಸ್ಕ್ಯಾನ್ ಮಾಡಲಾಗುವುದು. ಇಡೀ ದೇಶದಲ್ಲಿ ಹೊಸ ನಾಯಕರ ಸೃಷ್ಟಿ ಮಾಡಲು ಪ್ರಕ್ರಿಯೆ ಆರಂಭವಾಗಿದ್ದು, ಯುವ ನಾಯಕರನ್ನು ಬೆಳೆಸಲು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಇಡೀ ದೇಶದಲ್ಲಿ ಪಂಚಾಯತ್‍ನಿಂದ ಪಾರ್ಲಿಮೆಂಟ್‍ವರೆಗೂ ನಾಯಕರು ಇರಬೇಕು. ಅವರಿಗೆ ಜವಾಬ್ದಾರಿ ಇರಬೇಕು ಎಂದು ರಾಜೀವ್ ಗಾಂಧಿ ಅವರು ಒಂದು ಹೊಸ ಚಳುವಳಿ ಆರಂಭಿಸಿದರು. ನಾನು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದಾಗ ಅವರು ‘ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ನಾಯಕ’ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಈಗ ಯುವ ಕಾಂಗ್ರೆಸ್‍ನಲ್ಲಿ ಯುವ ನಾಯಕರನ್ನು ಸೃಷ್ಟಿ ಮಾಡಲು ಈ ಹೆಜ್ಜೆ ಇಟ್ಟಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವಕರು ನಾಯಕರಾಗಬೇಕಾದರೆ ನಾಯಕತ್ವದ ಗುಣ ಹೊಂದಿಕೊಂಡು ಚುನಾವಣಾ ಕಣದಿಂದ ನಾಯಕರಾಗಬೇಕು. ನೇಮಕ ಮಾಡುವ ಪದ್ಧತಿ ಬೇಡ ಎಂದು ಮನಗೊಂಡು ಎನ್‍ಎಸ್‍ಯುಐ ಹಾಗೂ ಯುವ ಕಾಂಗ್ರೆಸ್‍ನಲ್ಲಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಪಕ್ಷದ ಚುನಾವಣಾ ಆಯೋಗದ ಮೂಲಕ ಪಕ್ಷದ ಆಂತರಿಕ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿದೆ. ರಾಷ್ಟರ ಮಟ್ಟದಲ್ಲಿ ಹೊಸ ನಾಯಕರನ್ನು ಹುಡುಕಲು ಈ ಆಂತರಿಕ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಪಕ್ಷದ ಚುನಾವಣಾ ಉಸ್ತುವಾರಿಯಾಗಿರುವ ಪಿ.ಐ.ಅಹ್ಮದ್ ನಾಸಿರ್, ಪ್ರದೇಶ ರಿಟನಿರ್ಂಗ್ ಅಧಿಕಾರಿ ಪ್ರಮೋದ್‍ಕುಮಾರ್, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮಯ್ಯ ಉಪಸ್ಥಿತರಿದ್ದರು.

ಆಂತರಿಕ ಚುನಾವಣೆಗೆ ಮೀಸಲಾತಿ..!

ಪಕ್ಷದ ಆಂತರಿಕ ಚುನಾವಣೆಯಲ್ಲಿ ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೆ ಮೀಸಲಾತಿ ನೀಡಲಾಗುವುದು. ಬಳ್ಳಾರಿ, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಕೇಂದ್ರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಗಾಂಧಿಜೀ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷ: ವಿಶೇಷ ಕಾರ್ಯಕ್ರಮಕ್ಕೆ ಸಮಿತಿ ರಚನೆ..!

ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿ 100 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸರಕಾರದಿಂದ ವಿಶೇಷ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಿದ್ದೇವೆ. ಈ ದೃಷ್ಟಿಯಿಂದ ಕಾರ್ಯಕ್ರಮದ ರೂಪುರೇಷೆಗಾಗಿ ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ, ವೀರಪ್ಪ ಮೋಯ್ಲಿ ಅವರು ಮಾರ್ಗದರ್ಶಕರಾಗಿ, ಸಲಹಾ ಸಮಿತಿ ರಚಿಸಲಾಗುವುದು. ಬಿ.ಎಲ್.ಶಂಕರ್ ಈ ಸಮಿತಿಯ ಸಂಯೋಜಕರಾಗಿರಲಿದ್ದು, 15 ಜನ ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 60 ಸದಸ್ಯರುಗಳ ಸಮಿತಿ ಇದಾಗಿದೆ. ಅವರು ಚರ್ಚೆ ಮಾಡಿ ಕಾರ್ಯಕ್ರಮದ ಬಗೆಗೆ ಸಲಹೆ ನೀಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News