ವಿಜಯೇಂದ್ರ-ಡಿಕೆಶಿ ನಡುವಿನ ಹೊಂದಾಣಿಕೆ ರಾಜಕೀಯದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ : ಡಿ.ಕೆ.ಸುರೇಶ್
ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಹೊಂದಾಣಿಕೆ ರಾಜಕೀಯದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.
ವಿಜಯೇಂದ್ರ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಹೊಂದಾಣಿಕೆ ರಾಜಕೀಯದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂಬ ಯತ್ನಾಳ್ ನೀಡಿರುವ ಹೇಳಿಕೆ ಕುರಿತು ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಯತ್ನಾಳ್ ದಾಖಲೆಗಳನ್ನು ಬಿಡುಗಡೆ ಮಾಡಲಿ. ವಿಜಯೇಂದ್ರ ಮಾತ್ರವಲ್ಲ, ಯತ್ನಾಳ್ ಅವರಿಗೂ ಶಿವಕುಮಾರ್ ಜತೆ ಉತ್ತಮ ಬಾಂಧವ್ಯವಿದೆ. ಅವರು ಕೂಡ ಆತ್ಮೀಯರು. ಅವರು ಕೂಡ ಶಿವಕುಮಾರ್ ಜತೆಗೆ ಉಭಯಕುಶಲೋಪರಿ ಚರ್ಚೆ ಮಾಡುತ್ತಿರುತ್ತಾರೆ. ಕೇವಲ ವಿಜಯೇಂದ್ರ ಬಗ್ಗೆ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ನನಗೆ ಅವರ ಆಂತರಿಕ ವಿಚಾರ ಅಗತ್ಯವಿಲ್ಲ ಎಂದು ಸುರೇಶ್ ಹೇಳಿದರು.
ಬಿಜೆಪಿಯವರು ತಮ್ಮ ಹೋರಾಟವನ್ನು ಯತ್ನಾಳ್ ವಿರುದ್ಧ ಮಾಡುತ್ತಾರೋ, ನಮ್ಮ ವಿರುದ್ಧ ಮಾಡುತ್ತಾರೋ ಗೊತ್ತಿಲ್ಲ. ನಮ್ಮ ಸರಕಾರ ಅಭಿವೃದ್ಧಿ ಕಡೆ ಮುನ್ನಡೆಯುತ್ತಿದೆ. ವಿರೋಧ ಪಕ್ಷಗಳು ಜನರ ಕಷ್ಟ ಅರಿತು ಅಭಿವೃದ್ಧಿ ಕಡೆಗೆ ಆದ್ಯತೆ ನೀಡಬೇಕು. ಸಕಾರಾತ್ಮಕ ನಿಲುವು ನೀಡಬೇಕು ಎಂದು ಹೇಳಿದರು.
ಸ್ವಾಭಿಮಾನಿ ಸಮಾವೇಶ: ಸ್ವಾಭಿಮಾನಿ ಸಮಾವೇಶವು ಕಾಂಗ್ರೆಸ್ ಪಕ್ಷದ ಸಮಾವೇಶ. ಇದನ್ನು ರಾಜ್ಯದ ಮೂರು, ನಾಲ್ಕು ಕಡೆಗಳಲ್ಲಿ ಮಾಡುವ ಉದ್ದೇಶವಿದ್ದು, ಮೊದಲು ಹಾಸನದಲ್ಲಿ ಮಾಡಲಾಗುತ್ತಿದೆ. ಈ ಸಮಾವೇಶದಲ್ಲಿ ರಾಜ್ಯ ಹಾಗೂ ರಾಷ್ಟ್ರ ನಾಯಕರು ಭಾಗವಹಿಸಲಿದ್ದಾರೆ. ಕೆಲವರು ಹೇಳಿಕೆ ನೀಡುವಾಗ ಅವರನ್ನು ಓಲೈಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಾರೆ. ಆದರೆ ಎಲ್ಲರಿಗಿಂತ ಪಕ್ಷ ಮೊದಲು ಎಂದು ಅರಿತಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಸುರೇಶ್ ತಿಳಿಸಿದರು.