ಐರೋಪ್ಯ ರಾಷ್ಟ್ರಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಭಾಷಾ ತರಬೇತಿ | ಸಿಎಂ ಜೊತೆ ಚರ್ಚಿಸಿ ಕ್ರಮ : ಡಾ.ಆರತಿ ಕೃಷ್ಣ

Update: 2024-12-07 21:52 IST
ಐರೋಪ್ಯ ರಾಷ್ಟ್ರಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಭಾಷಾ ತರಬೇತಿ | ಸಿಎಂ ಜೊತೆ ಚರ್ಚಿಸಿ ಕ್ರಮ : ಡಾ.ಆರತಿ ಕೃಷ್ಣ
  • whatsapp icon

ಬೆಂಗಳೂರು : ಇತ್ತೀಚಿಗೆ ಐರೋಪ್ಯ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಕೌಶಲ್ಯ ತರಬೇತಿ ಜತೆಗೆ ಸರಕಾರದ ವತಿಯಿಂದ ಭಾಷಾ ತರಬೇತಿ ನೀಡುವ ಸಂಬಂಧ ಸಿಎಂ ಮತ್ತು ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ, ಕ್ರಮ ವಹಿಸಲಾಗುವುದು ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಭರವಸೆ ನೀಡಿದ್ದಾರೆ.

ಗುರುವಾರ ಇಟಲಿಯ ಪ್ರವಾಸದಲ್ಲಿರುವ ಆರತಿ ಕೃಷ್ಣ ಅವರು, ಅಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್ಯದಿಂದ ತೆರಳಿರುವ ಅಲ್ಲಿನ ನಿವಾಸಿಗಳು ಅಹವಾಲುಗಳನ್ನು ಸಲ್ಲಿಸಿದ್ದು, ಇದಕ್ಕೆ ಅವರು ಸ್ಪಂದಿಸಿದರು.

ಇದೇ ವೇಳೆ ಆರತಿ ಕೃಷ್ಣ, ಸಂಘದ ಪದಾಧಿಕಾರಿಗಳೊಂದಿಗೆ ಮುಕ್ತವಾಗಿ ಚರ್ಚಿಸಿದರು, ಇಟಲಿಯಲ್ಲಿ ಸುಮಾರು ಮೂರರಿಂದ ನಾಲ್ಕು ಸಾವಿರ ಕನ್ನಡಿಗರಿದ್ದು ಹೆಚ್ಚಾಗಿ ವಿಧ್ಯಾಭ್ಯಾಸ ಮತ್ತು ವ್ಯಾಪಾರ ಕಾರಣಗಳಿಂದ ಬಂದು-ಹೋಗುತ್ತಿರುತ್ತಾರೆ ಎಂದು ತಿಳಿಸಿದರು.

ಮುಖ್ಯವಾಗಿ ಇಟಲಿ ಹಾಗೂ ಇನ್ನಿತರ ಯುರೋಪ್ ರಾಷ್ಟ್ರಗಳಲ್ಲಿ ಕನ್ನಡಿಗರು ಎದುರಿಸುವ ಸಮಸ್ಯೆಗಳನ್ನು ತೋಡಿಕೊಂಡರು. ಇಟಲಿಗೆ ತೆರಳುವಾಗ 'Marriage certificate' ಮತ್ತು 'One and same certificate' ಸಮಸ್ಯೆಯಾಗುತ್ತಿದ್ದು ಆನ್ ಲೈನ್ ಮುಖಾಂತರ ಪಡೆಯುವ ಅಥವಾ ನವೀಕರಿಸುವ ವ್ಯವಸ್ಥೆಯಾದಲ್ಲಿ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

2019-20ರ ಕೋವಿಡ್-19 ಸಾಂಕ್ರಾಮಿಕ ಕಾರಣ ಉದ್ಯೋಗ ಮತ್ತು ಪ್ರವಾಸಕ್ಕೆಂದು ತೆರಳಿದ್ದ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ಪ್ರಯಾಣ ನಿರ್ಬಂಧ ಮತ್ತು ವಿಮಾನಯಾನ ಸ್ಥಗಿತಗೊಂಡ ಕಾರಣ ಇಟಲಿಯಲ್ಲೇ ಸಿಲುಕಿದ್ದ ಸಂದರ್ಭದಲ್ಲಿ ಡಾ.ಆರತಿ ಕೃಷ್ಣರನ್ನು ಸಂಪರ್ಕಿಸಿದಾಗ ತಾವು ಅಧಿಕಾರದಲ್ಲಿ ಇಲ್ಲದಿದ್ದರೂ ವಂದೇ ಭಾರತ್ ಮಿಷನ್ ಮುಖಾಂತರ ಆದ್ಯತೆಯ ಮೇರೆಗೆ ಕನ್ನಡಿಗರಿಗೆ ತ್ವರಿತವಾಗಿ ತಾಯ್ನಾಡು ತಲುಪುವಂತೆ ಮಾಡಿದ್ದ ಸಹಾಯವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯ ಜತೆಗೆ ಇಟಲಿ ಕನ್ನಡ ಸಂಘದ ಅಧ್ಯಕ್ಷ ಹೇಮೇಗೌಡ ರುದ್ರಪ್ಪ, ಉಪಾಧ್ಯಕ್ಷ ಸ್ಪ್ಯಾನ್ಸಿ ಡಿ'ಸೋಜಾ ಮತ್ತು ಶಾಂತಿ ಯೋಗ ಶಾಲೆಯ ಯೋಗ ಗುರು ಜೇಮ್ಸ್ ಉಪಸ್ಥಿತರಿದ್ದರು.

Delete Edit

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News