ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತಾಗಬೇಕು : ಸಿಎಂ ಸಿದ್ದರಾಮಯ್ಯ

Update: 2024-03-23 15:36 GMT

ಬೆಂಗಳೂರು: ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತಾಗಬೇಕು. ಹೀಗಾಗಿ ನ್ಯಾಯ ಪಡೆಯುವುದು ಸೇವೆ ಅಥವಾ ಸವಲತ್ತು ಆಗದೇ ಅದೊಂದು ಸಾಮಾನ್ಯ ಜನರ ಹಕ್ಕಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿರುವ ಡಾ. ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘವು ಆಯೋಜಿಸಿದ್ದ ‘ಭವಿಷ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಮತ್ತು ಉತ್ಕೃಷ್ಟತೆ’ ವಿಷಯದ ಕುರಿತ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ 21ನೆ ದೈವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಮಹತ್ತರವಾದ ತೀರ್ಪುಗಳನ್ನು ನೀಡುವ ಮೂಲಕ ನ್ಯಾಯಾಂಗ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್‍ರ ಆಶಯದಂತೆ ಸರ್ವೋಚ್ಛ ನ್ಯಾಯಾಲಯ ತನ್ನ ತೀರ್ಪುಗಳ ಮೂಲಕ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯವನ್ನು ಜನರಿಗೆ ಒದಗಿಸಿದೆ ಎಂದರು.

ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯಿಂದಾಗಿ ನ್ಯಾಯಾಲಯಗಳ ಮೇಲೆ ಒತ್ತಡ ಜಾಸ್ತಿಯಾಗುತ್ತಿದ್ದು, ಡಿಜಿಟಲೀಕರಣ, ಇ-ಕೋರ್ಟ್, ವರ್ಚುವಲ್ ಕೋರ್ಟ್‍ಗಳಂತಹ ಹೊಸ ಹೊಸ ಪರಿಹಾರಗಳನ್ನು ಬಳಸಿಕೊಳ್ಳುವಂತಾಗಬೇಕು. ಆಗ ಸಮಯ ಉಳಿತಾಯದ ಜೊತೆಗೆ ತ್ವರಿತವಾಗಿ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದಾಗಿದೆ ಎಂದರು.

ನ್ಯಾಯಾಲಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಲ್ಲಿ, ಹೆಚ್ಚು ಜನ ಒಳಗೊಳ್ಳುವುದರ ಜೊತೆಗೆ, ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಹೆಚ್ಚಾಗಬೇಕು ಎಂದರು.

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ ಮಾತನಾಡಿ, ಇಂದು ನ್ಯಾಯಾಂಗ ವ್ಯವಸ್ಥೆಯು ಬದಲಾದ ಕಾಲಘಟ್ಟದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ನ್ಯಾಯಾಂಗ ವೃತ್ತಿಯಲ್ಲಿ ಉತ್ಕೃಷ್ಣತೆ, ಕಾರ್ಯಕ್ಷಮತೆ, ಪಾರದರ್ಶಕತೆಯನ್ನು ನ್ಯಾಯಾಧೀಶರು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.

ಕರ್ನಾಟಕ ಸರಕಾರ ಇ-ಸೇವಾ ಕೇಂದ್ರ ಸ್ಥಾಪನೆಗೆ 10 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಇದರಿಂದ ಬಹಳಷ್ಟು ಜನರಿಗೆ ಪ್ರಯೋಜನವಾಗಿದೆ. ಮಹಿಳೆಯರು ನ್ಯಾಯಾಂಗದಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶದಲ್ಲಿ ಶೇ.37ರಷ್ಟು ಮಹಿಳೆಯರು ಹಾಗೂ ಕರ್ನಾಟಕದಲ್ಲಿ ಶೇ.44ರಷ್ಟು ಮಹಿಳೆಯರು ನ್ಯಾಯಾಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕರೆ ಅವರು ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲರು. ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕಾಗಿದೆ. ನ್ಯಾಯಾಂಗ ಅಧಿಕಾರಿ, ನೌಕರರಿಗೆ ವೇತನ, ನಗದು ರಹಿತ ಚಿಕಿತ್ಸೆ ಮುಂತಾದವುಗಳನ್ನು ಕಲ್ಪಿಸುವುದು ಮುಖ್ಯ ಎಂದರು.

ನ್ಯಾಯಾಧೀಶರು ಯಾವುದಕ್ಕೂ ಭಯಪಡದೆ ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಕೆಲಸ ನಿರ್ವಹಿಸಬೇಕು. ಕಾರ್ಯಭಾರದ ಒತ್ತಡವಿದ್ದಾಗಿಯೂ ಜನರಿಗೆ ನ್ಯಾಯ ಒದಗಿಸುವ ಮೂಲಕ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಅರವಿಂದ್ ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ(ಕೌಟುಂಬಿಕ), 2021ರಲ್ಲಿ ಶೇ.92, 2022ರಲ್ಲಿ ಶೇ.97, 2023ರಲ್ಲಿ ಶೇ.91.78ರಷ್ಟು ಪ್ರಕರಣಗಳು ಇತ್ಯರ್ಥಗೊಂಡಿದೆ. ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ. ಲೋಕ್ ಅದಾಲತ್ ಮೂಲಕ ಸಹ ಜನರ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ವಿ. ನಾಗರತ್ನ, ನ್ಯಾಯಮೂರ್ತಿ ಸೋಮಯ್ಯ ಬೋಪಣ್ಣ, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎನ್.ವಿ. ಅಂಜಾರಿಯಾ, ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಹರೀಶ್ ಎ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಕೆ. ನವೀನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News