ದೇಶದ್ರೋಹಿ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಕರಣ ದಾಖಲಿಸಿ: ಮುಖ್ಯಮಂತ್ರಿ ಚಂದ್ರು

Update: 2024-03-11 17:29 GMT

ಬೆಂಗಳೂರು: ಪದೇ ಪದೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎನ್ನುತ್ತಿರುವ ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ವಿರುದ್ಧ ರಾಜ್ಯ ಸರಕಾರ ಸ್ವಯಂ ಪ್ರೇರಿತ ದೂರು(ಸುಮೊಟೊ) ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜನತೆ ಬಿಜೆಪಿಯನ್ನು ಅಧಿಕಾರದಿಂದ ಹೊರಗೆ ದಬ್ಬಿದ್ದಾರೆ. ಇದೀಗ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಹೊತ್ತಿರುವ ಅನಂತ ಕುಮಾರ್ ರಂತಹ ದೇಶದ್ರೋಹಿಗಳ ವಿರುದ್ಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಠಿಣ ಕ್ರಮಕ್ಕೆ ಆದೇಶಿಸಬೇಕು. ಎಲ್ಲ ವಿಚಾರಕ್ಕೂ ಹೆದರಿಕೊಂಡು ಕುಳಿತುಕೊಳ್ಳುವುದು ತಮ್ಮ ಹುದ್ದೆಗೆ ಶೋಭೆಯಲ್ಲ ಎಂದಿದ್ದಾರೆ.

ಅನಂತ್ ಕುಮಾರ್ ರ ಸಂವಿಧಾನ ತಿದ್ದುಪಡಿಯ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಅದು ಕೇವಲ ಅನಂತಕುಮಾರ್ ಹೆಗಡೆ ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬಿಜೆಪಿ ಮತ್ತು ಆರೆಸ್ಸೆಸ್‍ನ ಮೂಲ ಉದ್ದೇಶವೇ ಸಂವಿಧಾನ ಬದಲಿಸುವುದಾಗಿದೆ. ಒಬಿಸಿ, ಎಸ್‍ಸಿ, ಎಸ್‍ಟಿ, ದಲಿತರು, ಬುಡಕಟ್ಟು ಜನಾಂಗದವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಆರೆಸ್ಸೆಸ್‍ನವರ ಕಾಲಾಳುಗಳಾಗಬಾರದು ಎಂದು ತಿಳಿಸಿದ್ದಾರೆ.

ವೈಯಕ್ತಿಕ ಹೇಳಿಕೆ ಎಂದು ಬಿಜೆಪಿ ತಳ್ಳಿ ಹಾಕುತ್ತಿರುವುದು ನ್ಯಾಯವಾದ ನಡೆಯಲ್ಲ. ಬಿಜೆಪಿಗೆ ಸಂವಿಧಾನದ ಮೇಲೆ ನಿಜಕ್ಕೂ ಗೌರವ ಇದ್ದರೆ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡಬಾರದು. ಆತನನ್ನು ಪಕ್ಷದಿಂದ ಶಾಶ್ವತವಾಗಿ ಉಚ್ಛಾಟನೆ ಮಾಡಬೇಕು. ಇಲ್ಲದಿದ್ದರೆ ಅನಂತ್ ಕುಮಾರ್ ಹೇಳಿಕೆಯು ಪಕ್ಷದ ಅಧಿಕೃತ ಹೇಳಿಕೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News