ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ : ಎಚ್.ಡಿ.ದೇವೇಗೌಡ

Update: 2025-03-02 22:31 IST
ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ : ಎಚ್.ಡಿ.ದೇವೇಗೌಡ
  • whatsapp icon

ಬೆಂಗಳೂರು : ನಾನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷನಲ್ಲ. ಬದಲಿಗೆ ಸಾಮಾನ್ಯ ಕಾರ್ಯಕರ್ತ. ಹೀಗಾಗಿ, ಒಬ್ಬ ಕಾರ್ಯಕರ್ತ ಎಂದು ಕರೆಯಿರಿ ಸಾಕು. ಎಲ್ಲಿಗೆ ಬೇಕಾದರೂ ಕರೆಯಿರಿ, ಬರುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ರವಿವಾರ ನಗರದ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ದ್ರೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ ತಯಾರಿ, ವಿಧಾನಮಂಡಲ ಅಧಿವೇಶನ ತಂತ್ರಗಾರಿಕೆ ಬಗೆಗಿನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯಾರೂ ಎದೆಗುಂದಬೇಕಿಲ್ಲ. ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಿ ಎಂದು ಕರೆ ನೀಡಿದರು.

ಹಿಂದೆ ಇಪ್ಪತ್ತ ಮೂರು ಜಿಲ್ಲೆಗಳು ಇದ್ದವು. ನಾನು ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಪ್ರವಾಸ ಮಾಡಿ ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟೋದು ಸುಲಭದ ಕೆಲಸವಲ್ಲ. ಹೀಗಾಗಿ ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ ಎಂದು ಮುಖಂಡರಿಗೆ ತಾಕೀತು ಮಾಡಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಲೋಕಸಭೆ, ವಿಧಾನಸಭೆ ಅಥವಾ ಇನ್ನಾವುದೇ ಚುನಾವಣೆ ಬಂದಾಗ ಎಚ್ಚೆತ್ತರೆ ಉಪಯೋಗ ಇಲ್ಲ. ಹಲವು ವರ್ಷಗಳಿಂದಲೇ ನಾವು ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ ಎಂದು ಹೇಳಿದರು.

ನಾಯಕನಾಗುವ ಕನಸು ಕಟ್ಟಿಕೊಂಡರೆ ಸಾಲದು. ಅದಕ್ಕೆ ಮೂಲ ಬಂಡವಾಳ ಎಂದರೆ ಪಕ್ಷ ಸಂಘಟನೆ. ನಿಮ್ಮ ಕ್ಷೇತ್ರ, ಮತಗಟ್ಟೆ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟಿ. ಸದಸ್ಯತ್ವ ಅಭಿಯಾನವನ್ನು ವೇಗಯುತವಾಗಿ ನಡೆಸಬೇಕು. ಯುವಜನರು, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಬೇಕು ಎಂದು ಸಚಿವರು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಎಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಡಾ. ಕೆ.ಅನ್ನದಾನಿ, ಕೆ.ಎ.ತಿಪ್ಪೇಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News