ದೇವದಾರಿ ಬೆಟ್ಟದಲ್ಲಿ ನಾನೇ ಗಣಿಗಾರಿಕೆಗೆ ಅವಕಾಶ ನೀಡಿರುವಂತೆ ಬಿಂಬಿಸಲಾಗುತ್ತಿದೆ : ಎಚ್‌ಡಿಕೆ

Update: 2024-06-23 16:03 GMT

ಬೆಂಗಳೂರು : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಹಿಲ್ ಪ್ರದೇಶದಲ್ಲಿ ಕೆಐಓಸಿಎಲ್ ಸಂಸ್ಥೆಗೆ ಗಣಿಗಾರಿಕೆಗೆ ಅವಕಾಶ ಕೊಟ್ಟಿರುವುದಕ್ಕೂ ನನಗೂ ಯಾವುದೆ ಸಂಬಂಧವಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ರವಿವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮುಂದುವರೆಸುವ ಕಡತಕ್ಕೆ ನಾನು ಸಹಿ ಹಾಕಿದ್ದೇನೆ. 1,738 ಕೋಟಿ ರೂ.ಗಳ ಅಗತ್ಯವಿದೆ. ಈ ಮೊತ್ತವನ್ನು ಕ್ರೋಢೀಕರಿಸಲು, ಸಂಸ್ಥೆಯವರು ಎರಡು ಬ್ಯಾಂಕ್‍ಗಳಲ್ಲಿ ಸಾಲ ಪಡೆಯುತ್ತಿದ್ದಾರೆ. ಅದಕ್ಕಾಗಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕು. ನಾನು ಆ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ ಎಂದರು.

ಆದರೆ, ದೇವದಾರಿ ಬೆಟ್ಟದಲ್ಲಿ ನಾನೇ ಗಣಿಗಾರಿಕೆ ನಡೆಸಲು ಅವಕಾಶ ನೀಡಿರುವಂತೆ ಸಾರ್ವಜನಿಕವಾಗಿ ಬಿಂಬಿಸಲಾಗುತ್ತಿದೆ. ನನ್ನ ಮೇಲಿನ ಸಿಟ್ಟಿನಿಂದಾಗಿ ರೀತಿ ಮಾಡುತ್ತಿದ್ದಾರೆ. ನಾನು ಹೊಸದಾಗಿ ಯಾವುದೆ ಗಣಿಗಾರಿಕೆ ಮಾಡಲು ಅವಕಾಶ ನೀಡುವ ಕುರಿತು ನಿರ್ಧಾರ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಸಂಸತ್ತಿನ ಅಧಿವೇಶನ ಪ್ರಾರಂಭವಾಗಲಿದೆ. ನಮ್ಮಿಂದ ಮುಖ್ಯಮಂತ್ರಿ ಏನು ನಿರೀಕ್ಷೆ ಮಾಡುತ್ತಿದ್ದಾರೆ ಎಂಬುದರ ಕುರಿತು ರಾಜ್ಯ ಸರಕಾರದ ಒಬ್ಬ ಸಚಿವರಾದರೂ ಬಂದು ಚರ್ಚೆ ಮಾಡಿದ್ದಾರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ವಿಶ್ವೇಶ್ವರಯ್ಯ ಸ್ಟೀಲ್ ಪ್ಲಾಂಟ್‍ಗೆ ಹೊಸ ರೂಪ ನೀಡಬೇಕು. ದೇಶದಲ್ಲಿ ಬಿಡಿಭಾಗಗಳ ಉತ್ಪಾದನೆ ಮಾಡಬೇಕು ಅನ್ನೋದು ಪ್ರಧಾನಿ ನರೇಂದ್ರ ಮೋದಿಯವರ ಆಶಯ. ಬೇರೆ ದೇಶದಿಂದ ಬಿಡಿಭಾಗಗಳನ್ನು ಆಮದು ಮಾಡಿಕೊಂಡರೆ ವಿದೇಶಿ ವಿನಿಮಯದ ಹೊರೆ ನಮ್ಮ ಮೇಲೆ ಬೀಳುತ್ತದೆ ಎಂದು ಅವರು ತಿಳಿಸಿದರು.

ನಾನು ಕೇಂದ್ರ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊಟ್ಟ ಮೊದಲು ಕೆಐಓಸಿಎಲ್ ಸಂಸ್ಥೆಗೆ ಸಂಬಂಧಪಟ್ಟ ಕಡತವನ್ನು ಸಹಿ ಹಾಕಿದೆ ಎಂಬ ಕಾರಣಕ್ಕಾಗಿ, ಆ ಯೋಜನೆಯನ್ನು ನಿಲ್ಲಿಸಬೇಕು ಎಂದು ರಾಜ್ಯ ಸರಕಾರದವರು ನಿನ್ನೆ ತೀರ್ಮಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಅಭ್ಯರ್ಥಿಯ ಮಾಡಿಲ್ಲ :

‘ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯ ಬಗ್ಗೆ ತೀರ್ಮಾನ ಮಾಡಿಲ್ಲ. ಇನ್ನೂ ಚುನಾವಣೆಯ ದಿನಾಂಕ ಪ್ರಕಟವಾಗಿಲ್ಲ. ಆಗಲೆ ಯಾಕೆ ಇಷ್ಟು ಅವಸರ? ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು, ಮುಖಂಡರು ಚರ್ಚೆ ಮಾಡಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ’ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News