ಪ್ರವಾಸೋದ್ಯಮ ಅಭಿವೃದ್ದಿಗೆ ಕೈಜೋಡಿಸುಲು ಉದ್ದಿಮೆದಾರರಿಗೆ ಎಚ್.ಕೆ.ಪಾಟೀಲ್ ಕರೆ

Update: 2024-06-16 14:43 GMT

ಬೆಂಗಳೂರು : ದಕ್ಷಿಣ ಭಾರತ ಉತ್ಸವದಲ್ಲಿ ಸುಮಾರು 4,200 ಕೋಟಿ ರೂ.ಬಂಡವಾಳ ಹೂಡಿಕೆಯಾಗಿದ್ದು, ಇದರ ಜೊತೆಗೆ ಉದ್ದಿಮೆದಾರರು ಇನ್ನಷ್ಟು ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೈಜೋಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಡಾ.ಎಚ್.ಕೆ.ಪಾಟೀಲ್ ಕರೆ ನೀಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ದಕ್ಷಿಣ ಭಾರತ ಉತ್ಸವ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಶಕ್ತಿ ಯೋಜನೆಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಶೇ.50ರಷ್ಟು ಹೆಚ್ಚಾಗಿದೆ. ಈ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಮೂಲಸೌಕರ್ಯಗಳ ಅಭಿವೃದ್ದಿಗೆ ವ್ಯಾಪಕ ಅವಕಾಶವಿದೆ ಎಂದರು.

ದಕ್ಷಿಣ ಭಾರತ ರಾಜ್ಯಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ದಿಗೆ ವಿಫುಲ ಅವಕಾಶಗಳಿವೆ. ಅವುಗಳಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎಫ್‍ಕೆಸಿಸಿಐ ಆಯೋಜಿಸಿರುವ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಈ ಉತ್ಸವದ ಮೂಲಕ ಸುಮಾರು 4,200 ಕೋಟಿ ರೂ.ಗಳಷ್ಟು ಹೂಡಿಕೆಯ ಪ್ರಸ್ತಾವನೆಗಳಿಗೆ ಒಡಂಬಡಿಕೆ ಆಗುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಫ್‍ಕೆಸಿಸಿಐ ಪದಾಧಿಕಾರಿಗಳ ಕಾರ್ಯ ಅಭಿನಂದನೆಗೆ ಅರ್ಹವಾಗಿದೆ ಎಂದರು.

ಈ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವುದು ಕೇವಲ ಸರಕಾರದಿಂದ ಸಾಧ್ಯವಿಲ್ಲ. ಈ ಕ್ಷೇತ್ರಗಳಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಇಲ್ಲಿನ ಹೂಡಿಕೆಯಿಂದ ಬಹಳಷ್ಟು ಉಪಯೋಗವನ್ನು ಉದ್ದಿಮೆದಾರರು ಪಡೆದುಕೊಳ್ಳಬಹುದಾಗಿದೆ. ಪ್ರವಾಸೋದ್ಯಮ ಎಂದರೆ ಕೇವಲ ಲಕ್ಸುರಿ ಪ್ರವಾಸೋದ್ಯಮ ಅಲ್ಲ, ಸಾಮಾನ್ಯ ಜನರ ಪ್ರವಾಸೋದ್ಯಮಕ್ಕೂ ಸರಕಾರ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು.

ದಕ್ಷಿಣ ಭಾರತ ಸಾಂಸ್ಕೃತಿಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದೆ. ಈ ಉತ್ಸವದ ಮೂಲಕ ದಕ್ಷಿಣ ಭಾರತ ರಾಜ್ಯಗಳ ಐತಿಹಾಸಿಕ, ಪಾರಂಪರಿಕ, ಸ್ಮಾರಕ ಸಂಪನ್ಮೂಲಗಳಲ್ಲಿನ ಅವಕಾಶಗಳನ್ನು ತೋರಿಸುವ ವೇದಿಕೆಯನ್ನು ನೀಡಲಾಗಿದೆ. ಎಲ್ಲರೂ ಜೊತೆಗೂಡಿ ವಿಶ್ವ ಪ್ರವಾಸೋದ್ಯಮ ಭೂಪಟದಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದು ಎಚ್.ಕೆ.ಪಾಟೀಲ್ ಕರೆ ನೀಡಿದರು.

ಎಫ್‍ಕೆಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮಾತನಾಡಿ, ದಕ್ಷಿಣ ಭಾರತ ರಾಜ್ಯಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ತರುವ ಪ್ರಯತ್ನಕ್ಕೆ ಯಶಸ್ಸು ದೊರೆತಿದೆ. ಕೈಗಾರಿಕಾ ಉತ್ಪಾದನೆ, ಕೃಷಿಯ ನಂತರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಮತ್ತು ಹೂಡಿಕೆಯ ಅವಕಾಶ ಇರುವುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ. ಈ ಉತ್ಸವದ ಮೂಲಕ ಎಫ್‍ಕೆಸಿಸಿಐ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಉದ್ದಿಮೆದಾರರನ್ನು ಪ್ರೋತ್ಸಾಹಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಂಡವಾಳ ಹೂಡಿಕೆಗೆ ಮುಂದಾದ ಕೆಲವು ಉದ್ದಿಮೆದಾರರಿಗೆ ಒಡಂಬಡಿಕೆಯ ಪತ್ರಗಳನ್ನು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಹಾಗೂ ಪ್ರವಾಸೋದ್ಯಮ ಸಚಿವ ಡಾ.ಎಚ್.ಕೆ ಪಾಟೀಲ್ ವಿತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News