ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ

Update: 2024-08-15 14:25 GMT

ಬೆಂಗಳೂರು: 78ನೆ ಸ್ವಾತಂತ್ರ್ಯ ದಿನಾಚರಣೆಯನ್ನು ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಗುರುವಾರ ಅದ್ಧೂರಿಯಾಗಿ ಆಚರಿಸಲಾಗಿದ್ದು, ಸಮಾರಂಭವು ಹಲವು ವಿಶೇಷತೆಗಳಿಂದ ಕೂಡಿತ್ತು.

ಕಾರ್ಯಕ್ರಮದಲ್ಲಿ ಪಥ ಸಂಚಲನ, ಸ್ವಾತಂತ್ರ್ಯ ಹೋರಾಟ ನೆನಪಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೈ ನವಿರೇಳಿಸುವ ಸೇನಾ ಯೋಧರ ಸಾಹಸಮಯ ಬೈಕ್ ಪ್ರದರ್ಶನ, ಪ್ಯಾರಾ ಮೋಟರ್ ಪ್ರದರ್ಶನ ಜನರ ಗಮನವನ್ನು ಸೆಳೆದವು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಬಳಿಕ ತೆರೆದ ವಾಹನದಲ್ಲಿ ಪರೇಡ್ ಪರಿವೀಕ್ಷಣೆ ಮಾಡಿ, ಗೌರವ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತಗೀತೆಗಳನ್ನು ಹಾಡಲಾಯಿತು. ಸುಮಾರು 8 ಸಾವಿರ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಆಕರ್ಷಕ ಪಥ ಸಂಚಲನ: ಪರೇಡ್ ಕಮಾಂಡರ್ ಗೋಪಾಲರೆಡ್ಡಿ ಹಾಗೂ ಡೆಪ್ಯುಟಿ ಕಮಾಂಡರ್ ಹರೀಶ್ ಹೆಚ್.ಎನ್.ನೇತೃತ್ವದಲ್ಲಿ ಗಡಿ ಭದ್ರತಾ ಪಡೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ, ಕೈಗಾರಿಕಾ ಭದ್ರತಾ ಪಡೆ, ಗೋವಾ ಪೊಲೀಸ್, ಶ್ವಾನದಳ, ಅಬಕಾರಿ, ಸಂಚಾರ ಪೊಲೀಸ್, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ಎನ್‍ಸಿಸಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್ ಶಾಲೆ, ಪೊಲೀಸ್ ಪಬ್ಲಿಕ್ ಶಾಲೆ, ಸಮರ್ಥನಂ ಹಾಗೂ ರಮಣಶ್ರೀ ಸಂಸ್ಥೆಗಳ ದೃಷ್ಟಿವಿಕಲಚೇತನ(ಅಂಧ) ಮಕ್ಕಳು ಸೇರಿದಂತೆ ವಿವಿಧ ಶಾಲಾ ತುಕಡಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

ಮನಸೆಳೆದ ಗ್ಯಾರಂಟಿ ಯೋಜನೆಗಳ ಗೀತೆ: ರಾಜ್ಯ ಸರಕಾರದ ಐದು ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ಗೀತೆಯೊಂದಕ್ಕೆ ಶಾಲಾ ಮಕ್ಕಳು ನೃತ್ಯ ಮಾಡಿದರು. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 400 ವಿದ್ಯಾರ್ಥಿಗಳು ನಂದಿಧ್ವಜ, ರಾಷ್ಟ್ರಧ್ವಜ, ನಾಡಧ್ವಜ ಹಿಡಿದು ವೀರಗಾಸೆ, ಡೊಳ್ಳುಕುಣಿತ ಸೇರಿ ವಿವಿಧ ವೇಷಭೂಷಣಗಳನ್ನು ತೊಟ್ಟು ಗೀತೆಗೆ ನೃತ್ಯ ಮಾಡಿದರು.

ಯಲಹಂಕದ ಸರಕಾರಿ ಪ್ರೌಢಶಾಲೆಯ 750 ವಿದ್ಯಾರ್ಥಿಗಳು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಮಹೇಶ್ ಕುಮಾರ್ ಟಿ. ನಿರ್ದೇಶನದಲ್ಲಿ ಮೂಡಿಬಂದ ‘ಜಯ ಭಾರತಿ' ಗೀತೆಗೆ ನೃತ್ಯವನ್ನು ಮಾಡಿದರು. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ಬಲಿದಾನದ ಕುರಿತು ಗೀತೆಯಲ್ಲಿ ಸೇರಿಸಲಾಗಿತ್ತು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಯೋಧ ಸುಭಾಷ್ ಚಂದ್ರ ಬೋಸ್ ಹಾಗೂ ಗಾಂಧೀ ಭಾವಚಿತ್ರಗಳನ್ನು ಹಿಡಿದು, ಮೈದಾನದಲ್ಲಿ ಕುಳಿತವರ ಕಣ್ಣ ಮುಂದೆ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವಂತೆ ನೃತ್ಯ ಪ್ರದರ್ಶನ ಮಾಡಿದರು.

ರಾಣಿ ಅಬ್ಬಕ್ಕ ದೇವಿ ದೃಶ್ಯ ರೂಪಕ: ಕಪ್ಪ ಕಾಣಿಕೆಯನ್ನು ಸಲ್ಲಿಸಿ ಶರಣಾಗುವಂತೆ ಅಹಂಕಾರದಿಂದ ವರ್ತಿಸಿದ ಪೋರ್ಚುಗೀಸರ ವಿರುದ್ಧ ಸಿಡಿದೆದ್ದ ‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ’ ಕುರಿತು ದೃಶ್ಯ ರೂಪಕವನ್ನು ಬಿಬಿಎಂಪಿ ಪಿಳ್ಳಣ್ಣ ಗಾರ್ಡನ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳು ಪ್ರದರ್ಶನ ಮಾಡಿದರು.

ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಸೆಂಟರಿನ ಸಿಪಾಯಿಗಳು ನಡೆಸಿದ ಮಲ್ಲಕಂಬ ಪ್ರದರ್ಶನದ ವಿವಿಧ ಭಂಗಿಗಳು ರೋಮಾಂಚನಗೊಳಿಸಿದವು. ಪ್ಯಾರಾಚೂಟ್ ರೆಜಿಮೆಂಟ್ ಟ್ರೇನಿಂಗ್ ಸೆಂಟರಿನ ಸಿಬ್ಬಂದಿಯ ಪ್ಯಾರಾ ಮೋಟರ್ ಬಳಸಿ ಆಕಾಶದಲ್ಲಿ ಹಾರಾಡುತ್ತಾ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದರು. ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಶಾಲೆಯವರಿಂದ ಮೈ ನವಿರೇಳಿಸುವ ಮೋಟಾರು ಸೈಕಲ್ ಪ್ರದರ್ಶನಗಳು ಜನರನ್ನು ಆಕರ್ಷಿಸಿದವು.

ಇದೇ ವೇಳೆ ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಂಸಾ ಪತ್ರ ನೀಡಿದರು.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News