ಸಿರಿಧಾನ್ಯ ಜಾಗೃತಿಗೆ ಅಭಿಯಾನದ ಸ್ವರೂಪ ನೀಡುವಲ್ಲಿ ಕರ್ನಾಟಕ ಮುಂಚೂಣಿ: ಡಿ.ಕೆ.ಶಿವಕುಮಾರ್

Update: 2024-01-07 17:05 GMT

Photo: X/@DKShivakumar

ಬೆಂಗಳೂರು: ಸಿರಿಧಾನ್ಯಗಳ ಉತ್ಪಾದನೆ, ಮೌಲ್ಯ ವರ್ಧನೆ, ರಫ್ತು ಮತ್ತು ಮಾರಾಟಕ್ಕೆ ಅಭಿಯಾನದ ಸ್ವರೂಪ ನೀಡುವಲ್ಲಿ ಕರ್ನಾಟಕವು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು, ಇದಕ್ಕಾಗಿ ಕೃಷಿ ಸಚಿವರು ಹಾಗೂ ಇಲಾಖೆಯು ಅಭಿನಂದನಾರ್ಹ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮೆಚ್ಚುಗೆ ವಕ್ತಪಡಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಏರ್ಪಡಿಸಿದ್ದ ಸಾವಯವ, ಸಿರಿಧಾನ್ಯ ಅಂತರ್ ರಾಷ್ಟ್ರೀಯ ವಾಣಿಜ್ಯ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ನಮ್ಮ ಮೂಲ ಬೇರುಗಳನ್ನು ಮರೆಯಬಾರದು. ಸಿರಿಧಾನ್ಯ ನಮ್ಮ ಪರಂಪರೆಯ ಆಹಾರವಾಗಿದ್ದು, ಅದನ್ನು ಬೆಳೆಸಿ, ಬಳಸಬೇಕು ಎಂದರು.

ರಾಜ್ಯ ಸರಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಿರಿಧಾನ್ಯಗಳ ಜಾಗೃತಿಗೆ ವಿಶೇಷ ಕಾಳಜಿ ವಹಿಸಿದೆ. ಇ‌ಷ್ಟೊಂದು ಉತ್ಕೃಷ್ಟ ದರ್ಜೆಯಲ್ಲಿ ಅಚ್ಚುಕಟ್ಟಾಗಿ ಸಿರಿಧಾನ್ಯ ಮೇಳ ಆಯೋಜಿಸಿರುವುದು ಪ್ರಶಂಸನೀಯ ಎಂದು ಅವರು ತಿಳಿಸಿದರು.

ಕೇಂದ್ರ ಬುಡಕಟ್ಟು ವ್ಯವಹಾರ, ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಮಾತನಾಡಿ, ಅತ್ಯಂತ ಪೌಷ್ಟಿಕತೆ ಸಿರಿಧಾನ್ಯಗಳ ಉತ್ಪಾದನೆ, ಬಳಕೆ ಮೌಲ್ಯ ವರ್ಧನೆಗೆ, ಜಾಗೃತಿ, ಪ್ರಚಾರಕ್ಕೆ ಆಂದೋಲನದ ರೂಪ ನೀಡಿರುವ ಕರ್ನಾಟಕದ ಪ್ರಯತ್ನ ಶ್ಲಾಘನೀಯ. ಕೇಂದ್ರ ಸರಕಾರ ಕೂಡ ಸಿರಿಧಾನ್ಯವನ್ನು ಸಿರಿ ಅನ್ನದ ಎಂದು ಪ್ರಚಾರ ಪಡಿಸುತ್ತಿದೆ. 2023 ಅನ್ನು ಅಂತರ್ ರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಣೆ ಮೂಡಿಸುವಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ದೇಶದ ಹಲವು ರಾಜ್ಯಗಳಲ್ಲಿ ಕೃಷಿಗೆ ನೀರಿನ ಕೊರತೆ ಇದೆ. ವಿಪರೀತ ರಾಸಾಯನಿಕ ಬಳಸಿ ಭೂಮಿಯ ಸತ್ವ ನಾಶವಾಗುತ್ತಿದೆ. ಸಾವಯವ ಕೃಷಿ ಹಾಗೂ ಸಿರಿಧಾನ್ಯ ಬೆಳೆ ಇದಕ್ಕೆ ಪರಿಹಾರವಾಗ ಬಲ್ಲದು ಮತ್ತು ರೈತರಿಗೆ ಲಾಭದಾಯಕವಾಗಬೇಕಿದೆ. ಕೇಂದ್ರ ಸರಕಾರ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತಿದೆ. ಇದಕ್ಕೆ ಧೃಡೀಕರಣ ನೀಡುವ ಕೆಲಸ ಕೂಡ ಮಾಡುತ್ತಿದೆ. ರೈತರು ಇದರ ಅನುಕೂಲ ಪಡೆದುಕೊಳ್ಳಬೇಕು. ನಾವೆಲ್ಲರೂ ಜಾಗೃತರಾಗಬೇಕು. ಕೃಷಿ ನವೋದ್ಯಮ ಮತ್ತು ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕೇಂದ್ರ ಸಚಿವ ಅರ್ಜುನ್ ಮುಂಡಾ ಕರೆ ನೀಡಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಬೆಂಗಳೂರು ಕೇವಲ ಐಟಿಬಿಟಿ ಹಬ್ ಆಗಿರದೆ ವಿಶ್ವದ ಸಿರಿಧಾನ್ಯ ರಾಜಧಾನಿಯಾಗಿದೆ. ಕರ್ನಾಟಕ ಸರಕಾರ 2016ರಲ್ಲೇ ಸಿರಿಧಾನ್ಯಗಳ ಜಾಗೃತಿ ಆಂದೋಲನ ಪ್ರಾರಂಭಿಸಿತು. ಅದರ ಫಲವಾಗಿಯೇ 2023ಅನ್ನು ಅಂತರ್‍ರಾಷ್ಟ್ರೀಯ ಸಿರಿಧಾನ್ಯ ಮೇಳ ಎಂದು ಘೋಷಿಸಲಾಯಿತು ಎಂದು ತಿಳಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ರಾಜಧಾನಿ ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಸಾವಯವ, ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಯಶಸ್ಸು ಸಮಸ್ತ ರೈತ ವರ್ಗ, ವರ್ತಕರು ಸಂಘಟಕರು ಹಾಗೂ ಅಧಿಕಾರಿಗಳಿಗೆ ಸಲ್ಲುತ್ತದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News