ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ: ಸಿಎಂ ಸಿದ್ದರಾಮಯ್ಯ

Update: 2024-03-01 17:49 GMT

ಬೆಂಗಳೂರು : ಅಂಗಾಂಗ ದಾನದಲ್ಲಿ ಕರ್ನಾಟಕವು ದೇಶದಲ್ಲಿಯೇ ಎರಡನೇ ಸ್ಥಾನವನ್ನು ಹೊಂದಿದ್ದು, ದಾನಿಗಳ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಸರಕಾರ ನೋಡಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶುಕ್ರವಾರ ನಗರದ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಅಂಗಾಂಗ ದಾನಿಗಳ ಕುಟುಂಬದವರಿಗೆ ‘ಪ್ರಶಂಸನಾ ಪತ್ರ’ ವಿತರಿಸಿ ಮಾತನಾಡಿದ ಅವರು, ಒಬ್ಬರ ಜೀವ ಹೋದ ಸಂದರ್ಭದಲ್ಲಿ ಮತ್ತೊಬ್ಬರ ಜೀವ ಉಳಿಸುವ ಬಗ್ಗೆ ಯೋಚಿಸುವುದು ಸಾಮಾನ್ಯ ಸಂಗತಿಯಲ್ಲ. ಅಂಗಾಂಗ ದಾನ ಹೆಚ್ಚಾಗಬೇಕು ಎಂದರು.

ರಾಜ್ಯದಲ್ಲಿ ಅಂಗಾಂಗ ದಾನ ಹೆಚ್ಚಳವಾಗುವ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಒತ್ತು ನೀಡಿದ್ದಾರೆ. ಅವರು ಕೈಗೊಂಡಿರುವ ಈ ಕಾರ್ಯ ಸುಲಭವಲ್ಲ. ಆದರೆ, ಇತರರ ಜೀವ ಉಳಿಸುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ನನ್ನ ಮುಖ್ಯಮಂತ್ರಿ ಅವಧಿಯಲ್ಲೇ ಅಂಗಾಂಗ ದಾನಕ್ಕೆ ಸೊಸೈಟಿ ಸ್ಥಾಪಿಸಿದ್ದೆ. ಈಗ ಸೊಸೈಟಿಯು ಸಾವಿರಾರು ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದೇ ರೀತಿ ಇನ್ನಷ್ಟು ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅಂಗಾಂಗ ದಾನ ಕೋರಿ ನೋಂದಾಯಿಸಿಕೊಂಡವರ ಸಂಖ್ಯೆ 8,000ಕ್ಕೂ ಹೆಚ್ಚಿದ್ದು, ಕಳೆದೊಂದು ವರ್ಷದಲ್ಲಿ ಕೇವಲ 178 ಅಂಗಾಂಗ ದಾನ ನಡೆದಿದೆ. ಜನರಲ್ಲಿ ಅಂಗಾಂಗ ದಾನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಅಂಗಾಂಗ ದಾನಿಗಳ ಕುಟುಂಬಸ್ಥರಿಗೆ ಪ್ರಶಂಸನಾ ಪತ್ರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಹಾಗೂ ಆಯುಕ್ತ ಡಿ.ರಂದೀಪ್ ಸೇರಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News