ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ರಾಷ್ಟ್ರಪತಿಗೆ ಪತ್ರ

Update: 2023-07-30 18:21 GMT

ಬೆಂಗಳೂರು: ಮಣಿಪುರದ ‘ಕುಕಿ’ ಬುಡಕಟ್ಟು ಸಮುದಾಯದ ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿರುವ ಹಿನ್ನೆಲೆ, ಈ ಹಿಂಸಾಚಾರದ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡುವ ಮೂಲಕ ದೇಶದಲ್ಲಿ ಸಾಂವಿಧಾನಿಕ ಮೌಲ್ಯವನ್ನು ಸಾರಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ, ಬೆಂಗಳೂರು ಆರ್ಚ್ ಡಯಾಸಿಸ್‍ನ ಮಹಿಳಾ ಆಯೋಗ ಪತ್ರ ಬರೆದಿದೆ.

ರವಿವಾರ ನಗರದ ಭಾರತಿ ನಗರದಲ್ಲಿರುವ ಕೋಲ್ಸ್ ಪಾರ್ಕ್‍ನಲ್ಲಿ ಆಯೋಗದಿಂದ ಆಯೋಜಿಸಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ರಾಜ್ಯ ವಕ್ಫ್ ಮಂಡಳಿಯ ಮಾಜಿ ಸದಸ್ಯೆ ಶೀಮಾ ಮೊಹ್ಸಿನ್ ಮಾತನಾಡಿ, ‘ಹಿಂಸಾಚಾರ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ಆಯೋಗವು ಖಂಡಿಸುತ್ತದೆ. ಸಾಂವಿಧಾನಿಕ ನೆಲೆಗಟ್ಟಿನಲ್ಲಿರುವ ರಾಜಕೀಯ ಮತ್ತು ಕಾನೂನು ವ್ಯವಸ್ಥೆ ಇಂಥ ಕೃತ್ಯಗಳನ್ನು ಕಂಡು ಕಣ್ಮುಚ್ಚಿ ಕುಳಿತಿರುವುದು ಬೇಸರದ ಸಂಗತಿ' ಎಂದರು.

ಪೊಲೀಸರ ಸಮ್ಮುಖದಲ್ಲೇ ಮಹಿಳೆಯರ ಹಿಂಸಾಚಾರ ನಡೆಯುತ್ತಿದ್ದು, ಅವರ ಅಸಹಾಯಕರಾಗಿದ್ದಾರೆ. ಪೊಲೀಸ್ ವ್ಯವಸ್ಥೆಯೇ ಈ ರೀತಿಯಲ್ಲಿ ಹದಗೆಟ್ಟರೆ ಸಾಮಾಜಿಕ ಭದ್ರತೆ, ನ್ಯಾಯ ಎಲ್ಲಿ ದೊರೆಯುತ್ತದೆ ಎಂದು ಶೀಮಾ ಮೊಹ್ಸಿನ್ ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಹೋರಾಟಗಾರ್ತಿ ರೂತ್ ಮನೋರಮಾ ಮಾತನಾಡಿ, ‘ಮಣಿಪುರದ ಗಲಭೆ ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿದ್ದರೂ, ರಾಷ್ಟ್ರಪತಿಗಳು ಮೌನಕ್ಕೆ ಜಾರಿರುವುದು ಅಚ್ಚರಿ ಮೂಡಿಸುತ್ತದೆ. ಭಾರತೀಯ ಸಂವಿಧಾನವನ್ನು ಖಾತರಿಪಡಿಸುವ ಮೇರು ಸ್ಥಾನದಲ್ಲಿರುವ ರಾಷ್ಟ್ರಪತಿಯವರು ಕೂಡಲೇ ಈ ಕುರಿತು ಮಾತನಾಡಬೇಕು. ಸ್ವತಃ ಮಹಿಳೆಯಾಗಿ ಅವರು ಮಣಿಪುರದ ಹೆಣ್ಣಿನ ಅಭದ್ರತೆಯನ್ನು ಖಂಡಿಸಿ ಅಲ್ಲಿನ ಸರಕಾರವನ್ನು ವಜಾಗೊಳಿಸಬೇಕು' ಎಂದು ಒತ್ತಾಯಿಸಿದರು.

ಕ್ಯಾಥೋಲಿಕ್ ವುಮೆನ್ಸ್ ಕಲೆಕ್ಟಿವ್‍ನ ಅಧ್ಯಕ್ಷೆ ಪ್ರಿಯಾ ಫ್ರಾನ್ಸಿಸ್ ಮಾತನಾಡಿ, ನಾಗರಿಕರನ್ನು ರಕ್ಷಿಸಲು ಮತ್ತು ಕಾನೂನುಕ್ರಮ ಕೈಗೊಳ್ಳಲು ವಿಫಲವಾಗಿರುವ ಅಲ್ಲಿನ ರಾಜ್ಯ ಸರಕಾರದ ಗೊಂದಲದ ಮೌನ ಮತ್ತು ನಿರಾಸಕ್ತಿ ಕಂಡು ನಾವು ಗಾಬರಿಗೊಂಡಿದ್ದೇವೆ. ಮಣಿಪುರದಲ್ಲಿ ನಾಚಿಕೆಗೇಡಿನ ಕೃತ್ಯ ನಡೆದಿದೆ. ನಮಗೆ ನಿಜಕ್ಕೂ ಆಘಾತಕಾರಿ ಸಂಗತಿಯೆಂದರೆ, ಅಲ್ಲಿನ ಪೊಲೀಸರು ಹಾಗೂ ಸಂಬಂಧಪಟ್ಟ ಡಿಸಿ ಮತ್ತು ಎಸ್ಪಿ ಈ ಭಯಾನಕ ನಿರ್ಭೀತ ಕೃತ್ಯಗಳನ್ನು ತಡೆಯಲು ಮುಂದಾಗಲಿಲ್ಲ. ಅಲ್ಲದೆ ಪ್ರಜಾಪ್ರಭುತ್ವದ ನಾಲ್ಕನೇ ಆಸ್ತಿಯಾದ ಮಾಧ್ಯಮಗಳು ಮೌನವಾಗಿದ್ದವು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತೆ ಹಾಗೂ ರಂಗಭೂಮಿ ಕಲಾವಿದೆ ಸುಷ್ಮಾ ವೀರ್ ಮಾತನಾಡಿ, ಭಾರತೀಯ ಮಹಿಳೆಯರ ಸಾಮೂಹಿಕ ಪ್ರಜ್ಞೆಯು ಈ ಕ್ರೂರ ಕೃತ್ಯಗಳಿಂದ ಅಲುಗಾಡಿದೆ, ಜನಸಮೂಹ ಮತ್ತು ಅದರ ಪ್ರಚೋದಕಗಳ ನಿರ್ಭಯದಿಂದ ಆಕ್ರೋಶಗೊಂಡಿದೆ. ಮಹಿಳೆಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಮತ್ತು ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಈ ಘೋರ ಅಪರಾಧವನ್ನು ತಡೆಯಲು ಪ್ರಯತ್ನಿಸಿದ ಇಬ್ಬರನ್ನು ನಿರ್ದಯವಾಗಿ ಕೊಲ್ಲಲಾಯಿತು. ಅಧಿಕಾರದ ಬೆಂಬಲವಿಲ್ಲದೆ ಇಂತಹ ಅನಾಗರಿಕ ಕೃತ್ಯಗಳು ನಡೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆರ್ಚ್ ಡಯಾಸಿಸ್‍ನ ಮಹಿಳಾ ಆಯೋಗದ ಸಲಹೆಗಾರ ಫಾದರ್ ಸುಸೈರಾಜ್, ಸೇಂಟ್ ಜೋಸೆಫ್ ಸಂಜೆ ಕಾಲೇಜಿನ ಪ್ರಾಂಶುಪಾಲ ಪೌಲ್ ನ್ಯೂಮನ್ ಸೇರಿದಂತೆ ಹಲವರು ಭಾಗವಹಿಸಿದ್ದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News