ವಿಶ್ವಮಟ್ಟದ ವೃತ್ತಿಪರ ಕೌಶಲ್ಯಗಳ ಸ್ಪರ್ಧಗೆ ರಾಜ್ಯದ 9 ವಿದ್ಯಾರ್ಥಿಗಳು : ಸಚಿವ ಶರಣ ಪ್ರಕಾಶ್ ಪಾಟೀಲ್

Update: 2024-08-28 15:20 GMT

ಬೆಂಗಳೂರು : ಫ್ರಾನ್ಸ್ ನ ಲಿಯೋನ್‍ನಲ್ಲಿ ನಡೆಯಲಿರುವ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ (ಕೆ.ಎಸ್.ಡಿ.ಸಿ) ರಾಜ್ಯದ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಫ್ರಾನ್ಸ್‌ಗೆ ತೆರಳುವ ಮುನ್ನ ಬುಧವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ವಿದ್ಯಾರ್ಥಿಗಳಿಗೆ ಶುಭ ಕೋರಿದ ಅವರು, ಸೆ.10 ರಿಂದ 15ರವರೆಗೆ ಫ್ರಾನ್ಸ್‌ನ ಲಿಯೋನ್ ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ವೃತ್ತಿಪರ ಕೌಶಲಗಳ ‘ಒಲಿಂಪಿಕ್ಸ್’ ಎಂದೇ ಬಣ್ಣಿಸಲಾಗುತ್ತದೆ. ಇದು ವಿಭಿನ್ನ ಕೌಶಲ್ಯ ಸ್ಪರ್ಧೆಗಳು ನಡೆಯುವ ವಿಶ್ವದ ಅತಿ ದೊಡ್ದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

22 ವರ್ಷದ ಒಳಗಿನ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ತಮ್ಮ ವೃತ್ತಿಪರ ಕೌಶಲ್ಯ ಪ್ರದರ್ಶಿಸಲಿದ್ದಾರೆ. ರಾಜ್ಯ ಕೌಶಲ್ಯ ಅಭಿವೃದ್ಧಿ ಮಂಡಳಿಯು ರಾಜ್ಯ ಸರಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಕರ್ನಾಟಕದ ಕೌಶಲಪೂರ್ಣ ಅಭ್ಯರ್ಥಿಗಳಿಗೆ ತಮ್ಮ ಕೌಶಲಗಳನ್ನು ರಾಷ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿ ಬಹುಮಾನಗಳನ್ನು ಗೆಲ್ಲುವ ಅವಕಾಶಗಳನ್ನು ಕಲ್ಪಿಸಿದೆ ಎಂದು ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಐಟಿಐ, ಡಿಪ್ಲೊಮೋ ಹಾಗೂ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಮಾಡುತ್ತಿರುವ ರಾಜ್ಯದ 9 ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಕೌಶಲ್ಯಗಳನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ಪ್ರಶಸ್ತಿಗಳನ್ನು ಪಡೆದು ರಾಜ್ಯ ಹಾಗೂ ದೇಶಕ್ಕೆ ಹೆಸರು ತರುವಂತೆ ಅವರು ಶುಭ ಹಾರೈಸಿದರು.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿ(ಎನ್.ಎಸ್.ಡಿ.ಸಿ)ಯು ಭಾರತ ಕೌಶಲ್ಯ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಿ ವಿಶ್ವ ಕೌಶಲ್ಯ ಸ್ಪರ್ಧೆಗೆ ತಯಾರಿ ಮಾಡುವ ಸ್ಪರ್ಧೆ ಆಯೋಜಿಸುತ್ತಾ ಬಂದಿದೆ. ಹೊಸದಿಲ್ಲಿಯಲ್ಲಿ ಮೇ 15 ರಿಂದ 19 ರ ವರೆಗೆ ಆಯೋಜಿಸಿದ್ದ ರಾಷ್ಟಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ಎರಡನೆಯ ಸ್ಥಾನ ಪಡೆದಿತ್ತು ಎಂದು ಅವರು ಸ್ಮರಿಸಿದರು.

ಈ ಸಂದರ್ಭದಲ್ಲಿ ಕೆಎಸ್‍ಡಿಸಿ ಅಧ್ಯಕ್ಷೆ ಕಾಂತಾ ನಾಯಕ್, ರಾಜ್ಯ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ವಿ. ರಮಣಾ ರೆಡ್ಡಿ, ಕೆಎಸ್‍ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಎಂ.ಕನಗವಳ್ಳಿ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ವೈ.ಕೆ.ದಿನೇಶ್ ಕುಮಾರ್, ಎನ್‍ಎಸ್‍ಡಿಸಿ ಸಲಹೆಗಾರ ವೆಣುಗೋಪಾಲ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News