ಬೆಂಗಳೂರು | ‘ಲೈಸೆನ್ಸ್ ರಾಜ್ ಕಾಯ್ದೆ’ ವಿರೋಧಿಸಿ ಬೀಡಿ, ಸಿಗರೇಟ್ ವ್ಯಾಪಾರಿಗಳ ಪ್ರತಿಭಟನೆ

Update: 2024-10-08 17:07 GMT

ಬೆಂಗಳೂರು : ಲೈಸೆನ್ಸ್ ರಾಜ್ ಕಠಿಣ ಕಾಯ್ದೆ ಜಾರಿಗೆ ತರುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಸಣ್ಣ ಬೀಡಿ ಸಿಗರೇಟ್ ಮಾರಾಟಗಾರರ ಸಂಘದ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಚಿಲ್ಲರೆ ಬೀಡಿ-ಸಿಗರೇಟ್ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಿ.ಎನ್.ಮುರಳಿ ಕೃಷ್ಣ, ‘ಜಾಹೀರಾತು ನಿಷೇಧ ಮತ್ತು ವಾಣಿಜ್ಯ ಮತ್ತು ವ್ಯಾಪಾರ ನಿಯಂತ್ರಣ ಮತ್ತು ಉತ್ಪಾದನೆ, ಸರಬರಾಜು ಹಾಗೂ ವಿತರಣಾ ಕಾಯ್ದೆ 2003, ಸಿಒಟಿಪಿಎ ಅಡಿಯಲ್ಲಿ ನಮ್ಮ ಸಂಘದ ಸದಸ್ಯರು ಈಗಾಗಲೇ ಅಧಿಕಾರಿಗಳಿಂದ ಪ್ರತೀ ದಿನ ಕಿರುಕುಳ ಅನುಭವಿಸುತ್ತಿದ್ದಾರೆ. ವ್ಯಾಪಾರಿಗಳ ಅನಕ್ಷರತೆ ಮತ್ತು ಅರಿವಿನ ಕೊರತೆಯ ಲಾಭವನ್ನು ಪಡೆದುಕೊಂಡು ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಲೈಸೆನ್ಸ್ ರಾಜ್ ಕಾಯ್ದೆಯ ಪ್ರಕಾರ ತಂಬಾಕು ಉತ್ಪನ್ನ ಮಾರಾಟಗಾರರು ಲೈಸೆನ್ಸ್ ಪಡೆಯಬೇಕು. ಅದನ್ನು ಪ್ರತೀ ವರ್ಷ ನವೀಕರಿಸಬೇಕು. ಜೊತೆಗೆ ಲೈಸೆನ್ಸ್ ಅನ್ನು ಪ್ರದರ್ಶಿಸಬೇಕು ಮತ್ತು ಸಲಹೆ ಪುಸ್ತಕದ ನಿರ್ವಹಣೆ ಮಾಡಬೇಕು, ಅನುಸರಿಸದಿದ್ದರೆ ಭಾರೀ ದಂಡ ಕಟ್ಟಬೇಕು ಎಂಬ ನಿಯಮಗಳಿವೆ. ಇದಕ್ಕೆ ಚಿಲ್ಲರೆ ವ್ಯಾಪಾರಿಗಳ ವಿರೋಧವಿದೆ ಎಂದು ಹೇಳಿದರು.

ಈ ಕಾಯ್ದೆಯಿಂದ ಲಕ್ಷಾಂತರ ಬಡವರು ಮತ್ತು ಬಹುತೇಕ ಅವಿದ್ಯಾವಂತ ಸಣ್ಣ ವ್ಯಾಪಾರಿಗಳು ಅಧಿಕಾರಿಗಳ ಕೈಯಲ್ಲಿ ಭಾರಿ ಕಿರುಕುಳವನ್ನು ಅನುಭವಿಸುತ್ತಾರೆ. ಕೋವಿಡ್ ಬಳಿಕ ಚಿಲ್ಲರೆ ವ್ಯಾಪಾರಿಗಳು ತತ್ತರಿಸುತ್ತಿದ್ದಾರೆ. ಲೈಸೆನ್ಸ್ ಪಡೆಯುವುದು ಸಣ್ಣ ವ್ಯಾಪಾರಿಗಳಿಗೆ ಬಹಳ ಕಷ್ಟಕರವಾಗಲಿದೆ. ಯಾಕೆಂದರೆ ಅವರಿಗೆ ಶುಲ್ಕ ಪಾವತಿಸುವುದು ದೊಡ್ಡ ಸಮಸ್ಯೆ. ಜೊತೆಗೆ ಅಗತ್ಯವಾದ ದಾಖಲೆ ಪತ್ರ ಸಿದ್ಧಪಡಿಸಲು ಬೇಕಾದ ಶಿಕ್ಷಣ ಅವರಿಗೆ ಇರುವುದಿಲ್ಲ ಎಂದರು.

ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ‘ಸುಲಭ ವ್ಯಾಪಾರ' ಮತ್ತು ‘ಉದ್ಯಮಶೀಲತೆಗೆ ಉತ್ತೇಜನ' ಕಾರ್ಯಕ್ರಮಗಳ ಮೂಲಕ ಕರ್ನಾಟಕದಲ್ಲಿ ವ್ಯಾಪಾರ ಪ್ರಕ್ರಿಯೆಗಳನ್ನು ಸರಳಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಲೈಸೆನ್ಸ್ ರಾಜ್ ಕಾಯ್ದೆಯ ಮೂಲಕ ತಂಬಾಕು ಉತ್ಪನ್ನಗಳ ವ್ಯಾಪಾರಕ್ಕೆ ಲೈಸೆನ್ಸ್ ಅನ್ನು ಕಡ್ಡಾಯಗೊಳಿಸುವ ನಗರಾಭಿವೃದ್ಧಿ ಇಲಾಖೆ ಮತ್ತು ಪುರಸಭೆಯ ಉದ್ದೇಶವು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿವೆ ಎಂದು ಅಭಿಪ್ರಾಯಪಟ್ಟರು.

ಪ್ರತಿಭಟನೆಯಲ್ಲಿ ರಾಜ್ಯ ಸಣ್ಣ ಬೀಡಿ ಸಿಗರೇಟ್ ಮಾರಾಟಗಾರರ ಸಂಘದ ಉಪಾಧ್ಯಕ್ಷ ಮುನಿರಾಜು, ಸದಸ್ಯರಾದ ಪ್ರಕಾಶ್, ರಾಮಾಂಜನೇಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News