ಎಚ್‍ಎಎಲ್‍ನಲ್ಲಿ ಕನ್ನಡಿಗರಿಗೆ ಉದ್ಯೋಗ ನಿರಾಕರಣೆ : ಡಾ.ಪುರುಷೋತ್ತಮ ಬಿಳಿಮಲೆ

Update: 2024-10-08 16:42 GMT

ಬೆಂಗಳೂರು : ಖಾಲಿ ಇರುವ ಗ್ರೂಪ್ ‘ಸಿʼ ಹುದ್ದೆಗಳನ್ನು ಸ್ಥಳೀಯ ಉದ್ಯೋಗ ವಿನಿಮಯ ಕೇಂದ್ರಗಳ ಮೂಲಕ ಮತ್ತು ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಪ್ರಕಟನೆ ಮಾಡುವುದರ ಮೂಲಕ ತುಂಬಲಾಗುತ್ತಿದೆ. ಎನ್ನುವ ಲಿಖಿತ ಮಾಹಿತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ ಎಚ್‍ಎಎಲ್‍ನ ಅಧಿಕಾರಿಗಳು ಈಗ ಸಂಸ್ಥೆಯ ನೇಮಕಾತಿಯಲ್ಲಿ ಈ ಎಲ್ಲ ಭರವಸೆಗಳನ್ನು ಗಾಳಿಗೆ ತೂರಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ನಿರಾಕರಿಸಿದ್ದಾರೆ. ಇದು ಸರಕಾರವನ್ನು ದಾರಿ ತಪ್ಪಿಸುವ ಪ್ರಯತ್ನವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಎಚ್‍ಎಎಲ್ ಕೇಂದ್ರೀಯ ಕನ್ನಡ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಎಚ್‍ಎಎಲ್ ಸಂಸ್ಥೆಯ ಆಡಳಿತದಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯವನ್ನು ಕಲ್ಪಿಸುವ ಕುರಿತು ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸೂಚನೆಗೆ ಪ್ರತಿಕ್ರಿಯಿಸಿರುವ ಎಚ್‍ಎಎಲ್ ಅಪರ ಪ್ರಧಾನ ವ್ಯವಸ್ಥಾಪಕರು ಸಂಸ್ಥೆಯ ಗ್ರೂಪ್ ‘ಸಿʼ ಮತ್ತು ‘ಡಿʼ ವೃಂದದ ಹುದ್ದೆಗಳಲ್ಲಿ ಶೇ.90ಕ್ಕೂ ಹೆಚ್ಚಿನ ಉದ್ಯೋಗಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದು, ಈ ವೃಂದಗಳ ನೇಮಕಾತಿಗಳಲ್ಲಿ ಸ್ಥಳೀಯರಿಗೆ ಸಂಪೂರ್ಣ ಅವಕಾಶವನ್ನು ನೀಡಲಾಗುತ್ತಿದೆ. ಎಂಬ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದ್ದು, ಶೀಘ್ರದಲ್ಲೇ ಈ ಕುರಿತು ಸಮಗ್ರ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಎಚ್‍ಎಎಲ್‍ನಲ್ಲಿ ಕನ್ನಡಿಗರ ಹಿತ ಕಾಯಲು ಪ್ರಾಧಿಕಾರವು ಬದ್ಧವಾಗಿದೆ. ಕೇಂದ್ರೀಯ ಕನ್ನಡ ಸಂಘದ ಹೋರಾಟಕ್ಕೆ ಪ್ರಾಧಿಕಾರ ಎಲ್ಲ ನೈತಿಕ ಬೆಂಬಲವನ್ನು ನೀಡಲಿದೆ ಎಂದು ಹೇಳಿದರು.

ಎಚ್‍ಎಎಲ್ ವತಿಯಿಂದ ನಿಶ್ಚಿತ ಅವಧಿಯ ಉದ್ಯೋಗಾಂಕ್ಷಿಗಳಿಗೆ ನಡೆಸಲಾಗಿರುವ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ನೀಡಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಡೆಗಣಿಸಿರುವುದು ಖಂಡನೀಯ ಎಂದರು.

ನೇಮಕಾತಿ ಪರೀಕ್ಷೆಯಲ್ಲಿ ಕೇವಲ ಆಂಗ್ಲ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ನೀಡಬೇಕೆಂಬ ಹೊಸ ನಿಯಮವನ್ನು ರೂಪಿಸಲಾಗಿದೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿ, ಈ ಕಾರಣಕ್ಕೆ ನೂರಾರು ಜನ ಕನ್ನಡೇತರ ಅಭ್ಯರ್ಥಿಗಳು ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ. ಇದು ತ್ರಿಭಾಷಾ ಸೂತ್ರದ ಉಲ್ಲಂಘನೆಯಷ್ಟೇ ಅಲ್ಲ. ಒಕ್ಕೂಟ ವ್ಯವಸ್ಥೆಗೆ ಕೇಂದ್ರ ಸರಕಾರವು ನೀಡಿರುವ ಅಗೌರವವಾಗಿದೆ. ಈ ಕುರಿತಂತೆ ಸಂಘಟಿತ ಹೋರಾಟಕ್ಕೆ ಅಣಿಯಾಗಬೇಕು. ಅವಶ್ಯವಿದ್ದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಎಚ್‍ಎಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಡಿ.ರಾಜೇಶ್, ಪ್ರಧಾನ ಕಾರ್ಯದರ್ಶಿ ದೇವರಾಜ್, ಸಂಘಟನಾ ಕಾರ್ಯದರ್ಶಿ ಜಯತೀರ್ಥ, ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News