ಬೆಂಗಳೂರು | ಇಸ್ರೇಲ್ ನರಮೇಧದ ವಿರುದ್ಧ ಶಾಂತಿಗಾಗಿ ಪ್ರತಿಭಟನೆ

Update: 2024-10-08 16:47 GMT

ಬೆಂಗಳೂರು : ಫೆಲೆಸ್ತೀನ್ ಮತ್ತು ಲೆಬನಾನ್ ದೇಶಗಳ ಮೇಲೆ ಇಸ್ರೇಲ್ ಆಕ್ರಮಣ ನಡೆಸುತ್ತಿರುವುದರ ವಿರುದ್ಧ ವಿಶ್ವದಾದ್ಯಂತ ಪ್ರತಿಭಟನೆಗಳನ್ನು ಸಂಘಟಿಸಲು ಐಸಿಒಆರ್ (ಕ್ರಾಂತಿಕಾರಿ ಪಕ್ಷಗಳ ಮತ್ತು ಸಂಘಟನೆಗಳ ಅಂತರ್‌ ರಾಷ್ಟ್ರೀಯ ಕಾರ್ಡಿನೇಷನ್) ಕರೆಯ ಮೇರೆಗೆ ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಯುದ್ಧ ವಿರೋಧಿ ಪ್ರತಿಭಟನೆಯನ್ನು ನಡೆಸಲಾಯಿತು.

ಮಂಗಳವಾರ ಈ ವೇಳೆ ಮಾತನಾಡಿದ ಎಸ್‍ಯುಸಿಐ ಜಿಲ್ಲಾ ಮುಖಂಡ ಎನ್.ರವಿ, ಒಂದು ವರ್ಷದಿಂದ ಫೆಲೆಸ್ತೀನ್‍ನ ಗಾಜಾ ಪಟ್ಟಿ ಮೇಲೆ ಅತ್ಯಂತ ವಿಧ್ವಂಸಕ ದಾಳಿ ನಡೆಸಿ ಸುಮಾರು 42ಸಾವಿರ ಜನರ ಪ್ರಾಣ ತೆಗೆದುಕೊಂಡಿರುವ ಇಸ್ರೇಲ್ ಈಗ ಲೆಬನಾನ್ ಮೇಲೂ ದಾಳಿ ನಡೆಸುತ್ತಿದೆ. 1948ರಿಂದ ಸತತವಾಗಿ ಫೆಲೆಸ್ತೀನ್‍ನ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಲಕ್ಷಾಂತರ ಜನರು ವಲಸೆ ಹೋಗುವಂತೆ ಮಾಡಿ ಲಕ್ಷಾಂತರ ಅಮಾಯಕ ಜನರನ್ನು ಕೊಂದು ಆ ನಾಡನ್ನು ಅವಶೇಷಗಳ ಬೀಡಾಗಿ ಪರಿವರ್ತಿಸಿದ ಇಸ್ರೇಲ್ ಕೃತ್ಯ ಅತ್ಯಂತ ಖಂಡನೀಯ ಎಂದು ಹೇಳಿದರು.

ಎಸ್‍ಯುಸಿಐ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಮಾತನಾಡಿ, 20 ಶತಮಾನದ ಆರಂಭದಲ್ಲಿಯೇ ಲೆನಿನ್ ಅವರು ಈ ಯುಗವನ್ನು ‘ಸಾಮ್ರಾಜ್ಯಶಾಹಿ ಯುದ್ಧಗಳು ಮತ್ತು ಕಾರ್ಮಿಕ ವರ್ಗದ ಕ್ರಾಂತಿಗಳ ಯುಗ' ಎಂದು ಕರೆದಿದ್ದರು. ಇಂದು ಸಾಮ್ರಾಜ್ಯಶಾಹಿಗಳು ಅದರಲ್ಲೂ ಅಮೆರಿಕದ ಸಾಮ್ರಾಜ್ಯಶಾಹಿಗಳು ತಮ್ಮ ಮಾರುಕಟ್ಟೆಯ ವಿಸ್ತರಣೆಗಾಗಿ, ಅತ್ಯಧಿಕ ಲಾಭಗಳಿಕೆಗಾಗಿ, ಮಿಲಿಟರಿ ಹಾಗೂ ರಾಜಕೀಯ ಪ್ರಾಬಲ್ಯ ಸ್ಥಾಪನೆಗಾಗಿ ಯುದ್ಧಗಳನ್ನು ಹುಟ್ಟು ಹಾಕುತ್ತಾರೆ ಎಂದು ಹೇಳಿದರು.

ತೃತೀಯ ಜಗತ್ತಿನ ರಾಷ್ಟ್ರಗಳ ಸಂಪತ್ತನ್ನು ದೋಚಿ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇಸ್ರೇಲ್ ದೇಶ ಇಷ್ಟೆಲ್ಲಾ ಅಟ್ಟಹಾಸದಿಂದ ಅಮಾಯಕರ ನರಮೇಧ ನಡೆಸಲು ಅಮೆರಿಕ ಸಾಮ್ರಾಜ್ಯಶಾಹಿಗಳ ಬೆಂಬಲವೇ ಕಾರಣ. ಯುದ್ಧಕೋರ ಅಮೆರಿಕ ಸಾಮ್ರಾಜ್ಯಶಾಹಿಗಳು ಮತ್ತು ಇಸ್ರೇಲ್‍ನ ಯುದ್ಧಗಳನ್ನು ತಡೆಗಟ್ಟಲು ಜಗತ್ತಿನ ಎಲ್ಲ ಶಾಂತಿಪರ ಶಕ್ತಿಗಳು ಒಂದುಗೂಡಿ ಪ್ರಬಲ ಶಾಂತಿಪರ ಚಳವಳಿಯನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಕಾಮ್ರೇಡ್ ಜಿ.ಹನುಮೇಶ್, ಎಐಡಿಎಸ್‍ಒನ ಅಪೂರ್ವ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News