ಬೆಂಗಳೂರು | ಒಂದೇ ತಿಂಗಳಲ್ಲಿ 40 ಡ್ರಗ್ಸ್ ಪ್ರಕರಣ, 67 ಮಂದಿ ಬಂಧನ : 3 ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ

Update: 2024-10-08 12:51 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮಾದಕ ವಸ್ತುಗಳ ಸಾಗಣೆ, ಮಾರಾಟ ಹಾಗೂ ಸೇವನೆ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ಕೈಗೊಂಡು ನಗರದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 40 ಪ್ರಕರಣಗಳು ದಾಖಲಾಗಿದ್ದು, 3ಕೋಟಿ ರೂ.ಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ನಗರ ಪೊಲೀಸರು ಎನ್‍ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್‌ ಸ್ಟಾನ್ಸ್ ಆಕ್ಟ್) ಕಾಯ್ದೆಯಡಿಯಲ್ಲಿ 40 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಸುಮಾರು 67 ಜನರನ್ನು ಬಂಧಿಸಿದ್ದಾರೆ, ಅದರಲ್ಲಿ ಮೂವರು ವಿದೇಶಿಗರಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು 171 ಕೆ.ಜಿ. ಗಾಂಜಾ, 2 ಕೆ.ಜಿ. ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ ಎಂಡಿಎಂಎ, 998 ಎಕ್ಸ್ಟೆಸಿ ಮಾತ್ರೆಗಳು ಮತ್ತು 1089 ಎಲ್.ಎಸ್.ಡಿ ಸ್ಟ್ರಿಪ್ಸ್‌ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಬಿ.ದಯಾನಂದ್ ಹೇಳಿದರು.

ನಗರದಲ್ಲಿ ಡ್ರಗ್ಸ್ ದಂಧೆ, ಮಾದಕ ದ್ರವ್ಯ ಸಾಗಣೆ ಅಥವಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಪ್ರತಿನಿತ್ಯ ನಗರದ ಪ್ರತಿಯೊಂದು ಭಾಗದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಗುರುತಿಸುವುದರ ಜೊತೆಗೆ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ. ಬೆಂಗಳೂರು ನಗರದಲ್ಲಿ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವ ವಿದೇಶಿಯರನ್ನೂ ಗಡಿಪಾರು ಮಾಡುತ್ತಿದ್ದೇವೆ. 2024ರಲ್ಲಿ ಬೆಂಗಳೂರಿನಲ್ಲಿ ಮಾದಕ ದ್ರವ್ಯ ದಂಧೆಗಾಗಿ ಸುಮಾರು 80 ವಿದೇಶಿಗರನ್ನು ಅವರ ದೇಶಗಳಿಗೆ ಗಡಿಪಾರು ಮಾಡಲಾಗಿದೆ ಎಂದು ಬಿ.ದಯಾನಂದ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News