‘ಗ್ಯಾರಂಟಿ’ಯಿಂದಾಗಿ ಗ್ರಾಮೀಣ ಜನರ ಜೀವನದಲ್ಲಿ ಬದಲಾವಣೆ : ಮೆಹ್ರೋಝ್ ಖಾನ್

Update: 2024-10-08 16:00 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳಿಂದಾಗಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ ಎಂದು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಎಸ್.ಆರ್.ಮೆಹ್ರೋಝ್ ಖಾನ್ ತಿಳಿಸಿದರು.

ಮಂಗಳವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ನನಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದೆ. ಈ ಗ್ಯಾರಂಟಿ ಯೋಜನೆಗಳು ಶೇ.95ರಷ್ಟು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ ಎಂದು ಹೇಳಿದರು.

ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕ ಭಾಗದ ಬಡವರು, ಮಹಿಳೆಯರು, ಯುವಕರಿಗೆ ಗ್ಯಾರಂಟಿಗಳ ಅನುಷ್ಠಾನದಿಂದ ಹೆಚ್ಚು ಉಪಯೋಗ ಆಗಿದೆ. ಅಲ್ಲದೇ, ಬಡತನ ರೇಖೆಗಿಂತ ಕೆಳಗಿರುವವರ ಸಬಲೀಕರಣ ಮಾಡಬೇಕೆಂಬ ಸರಕಾರದ ಉದ್ದೇಶವೂ ಈ ಗ್ಯಾರಂಟಿಗಳಿಂದ ಈಡೇರುತ್ತಿದೆ ಎಂದು ಮೆಹ್ರೋಝ್ ಖಾನ್ ತಿಳಿಸಿದರು.

ರಾಜ್ಯದಲ್ಲಿ ಐದು ಗ್ಯಾರಂಟಿಗಳ ಪ್ರಯೋಜನ 4.18 ಕೋಟಿ ಜನರಿಗೆ ತಲುಪುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಗ್ಯಾರಂಟಿ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡಿದ್ದೇನೆ. ಯುವ ನಿಧಿ ಬಗ್ಗೆ ಯುವಕರಿಗೆ ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕಿದೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದ್ದೇನೆ. ಫಲಾನುಭವಿಗಳ ಜೊತೆ ಸಂವಾದವನ್ನು ನಡೆಸಿದ್ದೇನೆ. ಜನರ ಅಭಿಪ್ರಾಯವು ಧನಾತ್ಮಕವಾಗಿದೆ ಎಂದು ಅವರು ಹೇಳಿದರು.

ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು ಜಾರಿಗೆ ತಂದ ನರೇಗಾ ಯೋಜನೆಯಿಂದಾಗಿ ಸುಮಾರು 13 ಕೋಟಿ ಭಾರತೀಯರು ಬಡತನ ರೇಖೆಗಿಂತ ಮೇಲೆ ಬರಲು ಸಾಧ್ಯವಾಯಿತು. ಅದೇ ರೀತಿ, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಭವಿಷ್ಯದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿವೆ. ಈ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಈಗಾಗಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಮೆಹ್ರೋಝ್ ಖಾನ್ ತಿಳಿಸಿದರು.

ಐದು ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಕೆಲವರಿಗೆ ಪ್ರತಿ ತಿಂಗಳು ಹಣ ತಲುಪುತ್ತಿಲ್ಲ. ಆದರೆ, ಬಾಕಿ ಹಣವನ್ನು ಸೇರಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News