ಕನ್ನಡ ಭಾಷೆ ಅನುಷ್ಠಾನಕ್ಕೆ ಎಸ್‍ಬಿಐ ಬದ್ಧ

Update: 2024-10-08 16:09 GMT

PC: (PTI)

ಬೆಂಗಳೂರು : ನಮ್ಮ ಬ್ಯಾಂಕ್‍ನ ಎಲ್ಲ ವ್ಯವಹಾರದಲ್ಲಿ ಕನ್ನಡ ಭಾಷೆಗೆ ಸರಿ ಸಮಾನವಾದ ಮಹತ್ವವನ್ನು ನೀಡುತ್ತಿದ್ದೇವೆ. ಎಸ್‍ಬಿಐ ವ್ಯವಹಾರ ಮತ್ತು ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

‘ಹಿಂದಿ ಹೇರಿಕೆಯ ವಿರುದ್ಧ-ಕರ್ನಾಟಕ’ ಈ ಕುರಿತು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಎಸ್‍ಬಿಐ, ನಮ್ಮ ಬ್ಯಾಂಕ್ ಆಗಲಿ ಅಥವಾ ಭಾರತ ಸರಕಾರವಾಗಲಿ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುಲಾಗುತ್ತಿಲ್ಲ. ಭಾರತ ಸರಕಾರದ ಅಧಿಕೃತ ಭಾಷಾ ನೀತಿಯು ಬ್ಯಾಂಕ್‍ಗಳಿಗೂ ಅನ್ವಯಿಸಲ್ಪಡುತ್ತದೆ. ಭಾರತ ಸರಕಾರ ಮತ್ತು ಬ್ಯಾಂಕ್‍ಗಳು ಯಾವುದೇ ಭಾರತೀಯ ಭಾಷೆಗಳ ವಿರುದ್ಧವಲ್ಲ ಎಂದು ಸ್ಪಷ್ಟಣೆ ನೀಡಿದೆ.

ಕರ್ನಾಟಕದ ಶಾಖೆಗಳಲ್ಲಿ ಕನ್ನಡ ಮಾತನಾಡಬಲ್ಲ ಸಿಬ್ಬಂದಿವರ್ಗದವರನ್ನು ನೇಮಿಸುವತ್ತ ಬ್ಯಾಂಕ್ ಪ್ರಯತ್ನಿಸುತ್ತಿದೆ. ಕನ್ನಡ ಬಾರದ ಸಿಬ್ಬಂದಿಗೆ ಬ್ಯಾಂಕ್ ಹಿಂದಿ ಮೂಲಕ ಕನ್ನಡ ಕಲಿಯುವಂತೆ ಹೊತ್ತಿಗೆಯನ್ನು ಮುದ್ರಿಸಿದೆ. ಈ ಹೊತ್ತಿಗೆಯ ಸಹಾಯದಿಂದ ಅವರು ಸುಲಭವಾಗಿ ಕನ್ನಡವನ್ನು ಕಲಿಯಬಹುದು. ಬ್ಯಾಂಕ್‍ನಲ್ಲಿ ಅಧಿಕೃತ ಭಾಷಾ ಅನುಷ್ಠಾನಕ್ಕೆ ಸಂಬಂಧಿಸಿದಂತೆ ‘ಹಿಂದಿ ದಿನಾಚರಣೆ’ಯನ್ನು ಭಾರತ ಸರಕಾರ ಮತ್ತು ಸಂಸದೀಯ ರಾಜ್ ಭಾಷಾ ಸಮಿತಿಯ ಆದೇಶದಂತೆ ಕೇವಲ ಸೆಪ್ಟೆಂಬರ್ ತಿಂಗಳಲ್ಲಿ, ವರ್ಷಕ್ಕೊಮ್ಮೆ ಆಚರಿಸಲಾಗುತ್ತದೆ ಎಂದು ಎಸ್‍ಬಿಐ ಪತ್ರದಲ್ಲಿ ಹೇಳಿದೆ.

ವೃತ್ತ ಆಧಾರಿತ ಅಧಿಕಾರಿಗಳು ಮತ್ತು ಗುಮಾಸ್ತ ವರ್ಗದ ಸಿಬ್ಬಂದಿಯನ್ನು ಕರ್ನಾಟಕದ ಬ್ಯಾಂಕ್‍ನಲ್ಲಿ ನೇಮಕ ಮಾಡಿಕೊಳ್ಳುವಾಗ ಕನ್ನಡದಲ್ಲಿ ನಡೆಸಲಾಗುವ ಭಾಷಾ ಪ್ರಾವೀಣ್ಯತೆ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಬ್ಯಾಂಕ್‍ನಲ್ಲಿ ಪ್ರತಿ ವರ್ಷವೂ ‘ಕನ್ನಡ ರಾಜ್ಯೋತ್ಸವ’ವನ್ನು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದೇವೆ. ವಿವಿಧ ವರ್ಗಗಳಲ್ಲಿ ಕನ್ನಡನಾಡು ನುಡಿಗೆ ದುಡಿದಿರುವ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಗೌರವ ಸಮರ್ಪಿಸುತ್ತೇವೆ. ರಾಜ್ಯೋತ್ಸವದ ಅಂಗವಾಗಿ ಹಲವು ಕನ್ನಡ ಸ್ಪರ್ಧೆಗಳನ್ನು ನಡೆಸಿ ರಾಜ್ಯೋತ್ಸವ ಕಾರ್ಯಕ್ರಮದ ದಿನ ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದೆ.

‘ಕೌಸ್ತುಭ’ ಎಂಬ ವಿಶಿಷ್ಟ ವಿನೂತನ ಕನ್ನಡ ಸ್ಮರಣಿಕೆಯನ್ನು ಪ್ರತಿ ವರ್ಷವೂ ಹೊರತರುತ್ತೇವೆ. ಅದರಲ್ಲಿ ನಮ್ಮ ಸಿಬ್ಬಂದಿ ವರ್ಗದವರು ಕನ್ನಡದಲ್ಲಿ ಬರೆದಿರುವ ಕಥೆ, ಕವನ, ಪ್ರಬಂಧಗಳನ್ನು ಪ್ರಕಟಿಸುತ್ತೇವೆ. ಸಾರ್ವಜನಿಕವಾಗಿ ಮಾಡುವ ಎಲ್ಲ ಪ್ರಕಟಣೆಗಳನ್ನು ಕನ್ನಡ, ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ತಪ್ಪದೆ ಮಾಡುತ್ತೇವೆ.

ಕನ್ನಡ ಮಾತನಾಡಲು ಬಾರದ ಸಿಬ್ಬಂದಿಗೆ ತರಬೇತಿ ನೀಡಲು ಹೆಚ್ಚಿನ ಮಹತ್ವವನ್ನು ಬ್ಯಾಂಕ್ ನೀಡುತ್ತಿದೆ. ಆರ್‍ಟಿಐಗೆ ಸಂಬಂಧಪಟ್ಟ ಹಲವು ಪತ್ರಗಳು ಗ್ರಾಹಕರ ಪತ್ರಗಳು ಕನ್ನಡದಲೇ ಸ್ವೀಕೃತವಾಗುತ್ತವೆ. ಅವುಗಳಿಗೆ ಕನ್ನಡದಲ್ಲೇ ಉತ್ತರಿಸಲಾಗುತ್ತದೆ. ನಾವು ನಡೆಸುವ ಎಲ್ಲ ತರಬೇತಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಕನ್ನಡೇತರರಿಗಾಗಿ ಒಂದು ಕನ್ನಡದ ತರಗತಿಯನ್ನು ನಡೆಸಲಾಗುತ್ತದೆ. ಗ್ರಾಹಕ ಸಂಪರ್ಕವಿರುವ ಎಲ್ಲ ಕಡೆಗಳಲ್ಲೂ ಕನ್ನಡ ಭಾಷೆಯನ್ನು ಅಳವಡಿಸಲಾಗಿದೆ ಎಂದು ಎಸ್‍ಬಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News