ಕಾರ್ಪೊರೇಟ್ ನೀತಿಗಳ ವಿರುದ್ಧ ಹೋರಾಡಲು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

Update: 2024-10-08 16:53 GMT

ಬೆಂಗಳೂರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಕಾರ್ಪೊರೇಟ್ ಪರ ನೀತಿಗಳ ವಿರುದ್ಧ ಹೋರಾಡಲು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‍ಕೆಎಂ) ನಿರ್ಧರಿಸಿದ್ದು, ಅ.16ಕ್ಕೆ ಹೊಸದಿಲ್ಲಿಯಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಚಳುವಳಿಯ ರೂಪುರೇಷೆ ತಯಾರಿಸಲಾಗುತ್ತದೆ ಎಂದು ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ದರ್ಶನ್ ಪಾಲ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿನ ಗಾಂಧಿಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನ.15ರೊಳಗೆ ಪ್ರತಿ ರಾಜ್ಯದಲ್ಲಿಯೂ ಎಲ್ಲಾ ರೈತ ಸಂಘಟನೆಗಳ ನಾಯಕತ್ವ ಸಭೆ, ಸಮಾವೇಶಗಳನ್ನು ನಡೆಸಲಾಗುವುದು. ಹಾಗೆಯೇ ದಕ್ಷಿಣ ಭಾರತದ ಇತಿಹಾಸದಲ್ಲಿ ಚಾಪು ಮೂಡಿಸುವಂತೆ ನ.26ರಂದು ಜಿಲ್ಲಾ ಮಟ್ಟದ ಸಾಮೂಹಿಕ ಕಾರ್ಯಕ್ರಮ ನಡೆಸಬೇಕು ಎಂದರು.

ಪ್ರಮುಖ ಬೇಡಿಕೆಗಳ ಆಧಾರದ ಮೇಲೆ ಗರಿಷ್ಠ ಕಿಸಾನ್ ಮತ್ತು ಕೃಷಿ ಕಾರ್ಮಿಕರ ಸಂಘಟನೆಗಳೊಂದಿಗೆ ಸಮನ್ವಯ ನಡೆಸುವುದು. ಪ್ರತಿ ಎಸ್‍ಸಿಸಿಗಳು ರೈತರು ಮತ್ತು ಕೃಷಿ ಕಾರ್ಮಿಕರ ಏಕತೆಗಾಗಿ ನೀತಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಎಲ್ಲ ಬೆಳೆಗಳ ಖರೀದಿ ಬೆಲೆ, ಸಮಗ್ರ ಸಾಲ ಮನ್ನಾ, ವಿದ್ಯುತ್ ಖಾಸಗೀಕರಣಗೊಳಿಸದಿರುವುದು, ಸರಕಾರಿ ಬೆಳೆ ವಿಮೆ, ರೈತರ ಪಿಂಚಣಿ, ಬೆಳೆ ನಾಶ, ಬೆಳೆಗೆ ಬೆಂಕಿಗೆ ಪರಿಹಾರ ಸೇರಿದಂತೆ ಸ್ಥಳೀಯ ಬೇಡಿಕೆಗಳನ್ನು ಆಯಾ ರಾಜ್ಯ ಘಟಕಗಳು ಆದ್ಯತೆಯೊಂದಿಗೆ ಸೇರಿಸಬೇಕು ಎಂದು ದರ್ಶನ್ ಪಾಲ್ ಒತ್ತಾಯಿಸಿದರು.

ವಿವಿಧ ರಾಜ್ಯಗಳಲ್ಲಿ 2013ರ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ ಹಾಗೂ ಅರಣ್ಯ ಹಕ್ಕು ಕಾಯಿದೆಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಭೂಕಬಳಿಕೆಯನ್ನು ಕೂಡಲೇ ನಿಲ್ಲಿಸಬೇಕು. ಭೂಕಬಳಿಸುವಿಕೆ ವಿರುದ್ಧ ವಿವಿಧ ರಾಜ್ಯಗಳಲ್ಲಿ ರೈತರು ಮತ್ತು ಜನರು ನಡೆಸುತ್ತಿರುವ ಹೋರಾಟಗಳನ್ನು ನಾವು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.

ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ, ರಾಜ್ಯ ಕೃಷಿ ಬೆಲೆ ಆಯೋಗಗಳಿಗೆ ರೈತರ ಪ್ರತಿನಿಧಿಗಳನ್ನು ಸೇರಿಸುವ ಮೂಲಕ ಶಾಸನಬದ್ಧ ಸಂಸ್ಥೆಗಳನ್ನಾಗಿ ಮಾಡಬೇಕು. ಎಂಎಸ್‍ಪಿಯನ್ನು ಖಚಿತಪಡಿಸಬೇಕು ಮತ್ತು ಸರಿಯಾದ ಖರೀದಿ ಬೆಲೆ ಖಚಿತಪಡಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಬೇಕು. ರಾಜ್ಯ ಸರಕಾರಗಳು ರೈತರ ಮೇಲಿನ ಯಾವುದೇ ಮಾರುಕಟ್ಟೆ ತೆರಿಗೆ ಅಥವಾ ಸೆಸ್ ಅನ್ನು ಮನ್ನಾ ಮಾಡಬೇಕು. ಖಾಸಗಿ ಲೇವಾದೇವಿದಾರರು ಮತ್ತು ಮೈಕ್ರೋ ಫೈನಾನ್ಸಿಂಗ್ ಸಂಸ್ಥೆಗಳ ಶೋಷಣೆಯನ್ನು ನಿಲ್ಲಿಸಬೇಕು. ಬಡ ರೈತರು, ಭೂರಹಿತರು, ಕೃಷಿ ಕಾರ್ಮಿಕರು ಮತ್ತು ಗೇಣಿದಾರರಿಗೆ ಬಡ್ಡಿರಹಿತ ಸಾಲವನ್ನು ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಇದೇ ವೇಳೆ ಎಸ್‍ಕೆಎಂನ ಮುಖಂಡರಾದ ಕೃಷ್ಣ ಪ್ರಸಾದ್, ಡಾ. ಸುನೀಲಂ, ವಿಜು ಕೃಷ್ಣನ್, ರವುಲ ವೆಂಕಯ್ಯ, ವಿ.ವೆಂಕಟರಾಮಯ್ಯ ಮತ್ತು ಅನೇಕ ಪ್ರಮುಖ ರಾಷ್ಟ್ರೀಯ ನಾಯಕರು ಇದ್ದರು.

ಫೆಲೆಸ್ತೀನ್ ಕುರಿತು ವಿಶೇಷ ನಿರ್ಣಯ:

ಸಂಯುಕ್ತ ಕಿಸಾನ್ ಮೋರ್ಚಾವು ಇಸ್ರೇಲಿ ಸರಕಾರದ ನರಮೇಧವನ್ನು ಬಲವಾಗಿ ಖಂಡಿಸಿದ್ದು, ಸಭೆಯಲ್ಲಿ ಫೆಲೆಸ್ತೀನ್ ಕುರಿತು ನಿರ್ಧಾರಗಳನ್ನು ಪ್ರಕಟಿಸಿದೆ.

* ಭಾರತವು ಇಸ್ರೇಲ್‍ಗೆ ಎಲ್ಲ ಶಸ್ತ್ರಾಸ್ತ್ರ ಸರಬರಾಜು ನಿಲ್ಲಿಸಬೇಕು ಮತ್ತು ಇಸ್ರೇಲ್‍ನೊಂದಿಗಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ಭಾರತ ಸರಕಾರ ನಿಲ್ಲಿಸಬೇಕು.

* ಭಾರತ ಸರಕಾರವು ಸಾವಿರಾರು ಭಾರತೀಯ ಕಟ್ಟಡ ಕಾರ್ಮಿಕರನ್ನು ಫೆಲೆಸ್ತೀನ್‍ಗೆ ಕಳುಹಿಸುತ್ತಿದ್ದು, ಈ ನೀತಿಯನ್ನು ಕೈ ಬಿಡಬೇಕು.

* ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಮತ್ತು ಇಂಟರ್‌ ನ್ಯಾಷನಲ್ ಕ್ರಿಮಿನಲ್ ಕೋರ್ಟ್ ತೀರ್ಪಿನ ಪ್ರಕಾರ ಇಸ್ರೇಲಿ ನಾಯಕರು ಮಾಡಿದ ಯುದ್ಧ ಅಪರಾಧಗಳಿಗಾಗಿ ಕಾನೂನು ಕ್ರಮ ಜರುಗಿಸಬೇಕು.

* ಫೆಲೆಸ್ತೀನ್ ಎಂಬ ಸ್ವತಂತ್ರ ಮತ್ತು ಸಾರ್ವಭೌಮ ದೇಶವನ್ನು ಸ್ಥಾಪನೆಯಾಗಬೇಕು.

* ಇಸ್ರೇಲ್-ಯುಎಸ್ ವಸಾಹತುಶಾಹಿ ಆಕ್ರಮಣದಿಂದ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ನಮ್ಮ ಸ್ವಾತಂತ್ರ್ಯ ಚಳುವಳಿ ಮತ್ತು ವಸಾಹತುಶಾಹಿ ವಿರೋಧಿ ಚಳುವಳಿಗಳ ಪರಂಪರೆಗೆ ಬದ್ಧವಾಗಿರುವ ಎಲ್ಲ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಪ್ಯಾಲೇಸ್ತೀನ್ ಜನರ ಪರವಾಗಿ ನಿಲ್ಲಬೇಕು.

* ನಾವು ಎಲ್ಲ ಇಸ್ರೇಲಿ ಉತ್ಪನ್ನಗಳ ಬಹಿಷ್ಕರಿಸಬೇಕು. ಭಾರತ ಮತ್ತು ಪ್ರಪಂಚದಲ್ಲಿ ಫೆಲೆಸ್ತೀನ್ ಪರ ಬೆಂಬಲ ಪಡೆಯಲು ಅಖಿಲ ಭಾರತ ಅಭಿಯಾನವನ್ನು ಮಾಡಬೇಕು.

* ಇಸ್ರೇಲ್ ಆಕ್ರಮಣದಿಂದ ವಿವಿಧ ದೌರ್ಜನ್ಯಗಳನ್ನು ಅನುಭವಿಸುತ್ತಿರುವ ಫೆಲೆಸ್ತೀನ್ ರೈತರೊಂದಿಗೆ ನಿಲ್ಲುತ್ತೇವೆ.

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News