ಪಿಎಸ್‍ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ಜೊತೆ ನಂಟು | ಸಂಸದ ಉಮೇಶ್ ಜಾಧವ್ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2024-04-19 16:46 GMT

 ದಿವ್ಯಾ ಹಾಗರಗಿ ಜೊತೆ ಇರುವ ಸಂಸದ ಉಮೇಶ್‌ ಜಾದವ್

ಬೆಂಗಳೂರು : ಪಿಎಸ್‍ಐ ಪರೀಕ್ಷೆ ಹಗರಣದಲ್ಲಿ ಶರತ್ತುಬದ್ಧ ಜಾಮೀನಿನ ಮೇಲೆ ಹೊರಗಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪರವಾಗಿ ಸಂಸದ ಉಮೇಶ್ ಜಾಧವ್ ನಿಂತಿದ್ದಾರೆ. ಅಲ್ಲದೆ, ಈ ಹಗರಣದ ಪ್ರಕರಣದಲ್ಲಿ ಸಾಕ್ಷ್ಯವನ್ನು ನಾಶ ಮಾಡಲು ಪ್ರಭಾವ ಬೀರಿದ್ದಾರೆ ಎಂಬ ಸಂಶಯವಿದೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ.

ಶುಕ್ರವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ದೂರು ನೀಡಿದ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಹಾಗೂ ಕಾನೂನು ಘಟಕದ ಉಪಾಧ್ಯಕ್ಷ ಎನ್.ದಿವಾಕರ್, ಪಿಎಸ್‍ಐ ಪರೀಕ್ಷೆ ಹಗರಣದ ವಿಚಾರಣೆ ಪ್ರಕ್ರಿಯೆ ಮೇಲೆ ಉಮೇಶ್ ಜಾಧವ್ ತಮ್ಮ ರಾಜಕೀಯ ಸ್ಥಾನಮಾನ ಹಾಗೂ ಪ್ರಭಾವ ಬೀರುತ್ತಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಸಾಕ್ಷ್ಯಧಾರಗಳನ್ನು ನಾಶ ಮಾಡಬಾರದು ಸೇರಿದಂತೆ ಇನ್ನಿತರ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ದಿವ್ಯಾ ಹಾಗರಗಿಗೆ ಜಾಮೀನು ನೀಡಿದೆ. ಆದರೆ, ಸಂಸದರ ಜೊತೆಗಿನ ಒಡನಾಟವು ನ್ಯಾಯಾಲಯದ ಸೂಚನೆಗಳಿಗೆ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರುವಂತಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.

ಸಂಸದರ ಬಹಿರಂಗ ಬೆಂಬಲವು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ದಿವ್ಯಾ ಹಾಗರಗಿಯನ್ನು ಕಾನೂನು ಕುಣಿಕೆಯಿಂದ ರಕ್ಷಿಸುವ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಈ ಬೆಳವಣಿಗೆಯು ನ್ಯಾಯಾಂಗ ವ್ಯವಸ್ಥೆ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಹಾಳು ಮಾಡುತ್ತದೆ. ಈ ಆರೋಪಗಳ ಕುರಿತು ಕೂಲಂಕಷವಾಗಿ ತನಿಖೆ ಮಾಡಲು ಭಾರತೀಯ ಚುನಾವಣಾ ಆಯೋಗವು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News