ಲೋಕಸಭಾ ಚುನಾವಣೆ | ಶೋಭಾ ಕರಂದ್ಲಾಜೆ, ರಾಜೀವ್ ಗೌಡ, ಮನ್ಸೂರ್ ಅಲಿಖಾನ್ ನಾಮಪತ್ರ ಸಲ್ಲಿಕೆ

Update: 2024-04-03 14:21 GMT

ಬೆಂಗಳೂರು: ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (ಬಿಜೆಪಿ)ಬೆಂಗಳೂರು ಉತ್ತರ ಕ್ಷೇತ್ರದಿಂದ, ಮನ್ಸೂರ್ ಅಲಿಖಾನ್ (ಕಾಂಗ್ರೆಸ್)ಬೆಂಗಳೂರು ಕೇಂದ್ರ ಹಾಗೂ ಪ್ರೊ.ರಾಜೀವ್ ಗೌಡ (ಕಾಂಗ್ರೆಸ್) ಉತ್ತರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬುಧವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್‍ಗೌಡ ಅವರು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅದೇ ರೀತಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಮನ್ಸೂರ್ ಅಲಿ ಖಾನ್ ಇಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೊ.ರಾಜೀವ್‍ಗೌಡ, ‘ಕ್ಷೇತ್ರದ ಜನರ ಕಷ್ಟದ ಸಮಯದಲ್ಲಿ ಐದು ಗ್ಯಾರಂಟಿಗಳನ್ನು ರಾಜ್ಯ ಸರಕಾರ ಕೊಟ್ಟಿದೆ. ನಮಗೆ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ. ಇನ್ನೊಂದೆಡೆ ಬಿಜೆಪಿ ಸಂಸದರು ಜನರ ಜೊತೆ ಕಾಣಿಸಿಲ್ಲ. ನಾನು ಜನರ ಜೊತೆ ಕೆಲಸ ಮಾಡುತ್ತಿದ್ದೇನೆ. ಎಲ್ಲರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅದಕ್ಕಾಗಿ ಮತ ಹಾಕುತ್ತೇವೆಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರದಿಂದ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ಕರ್ನಾಟಕದ ಬಗ್ಗೆ ಧ್ವನಿ ಎತ್ತಬೇಕಾದ ಇಲ್ಲಿನ ಸಂಸದರು ಸಂಸತ್‍ನಲ್ಲಿ ಧ್ವನಿ ಎತ್ತಲಿಲ್ಲ. ರಾಜ್ಯದ ಪರವಾಗಿ ಧ್ವನಿ ಎತ್ತುವ ಸಂಸದರು ಜನತೆಗೆ ಬೇಕಾಗಿದ್ದಾರೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಜನರು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ಅವರು ನುಡಿದರು.

ಸಚಿವ ಭೈರತಿ ಸುರೇಶ್ ಮಾತನಾಡಿ, ‘ದೇಶವನ್ನು ಒಡೆಯುವ ಪಕ್ಷ ಬಿಜೆಪಿ. ಇದು ಭಾರತ ದೇಶದ ಪ್ರಜಾಪ್ರಭುತ್ವ, ರೈತರ, ಮಹಿಳೆಯರ ಪರವಾದ ಚುನಾವಣೆಯಾಗಿದೆ. ಬಿಜೆಪಿ ಪಕ್ಷಕ್ಕೆ ಮತ್ತೊಂದು ಬಾರಿ ಅವಕಾಶ ಮಾಡಿ ಕೊಟ್ಟರೆ ದೇಶ ನಾಶವಾಗುತ್ತದೆ ಎಂದರು.

ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಕ್ಷೇತ್ರದಲ್ಲಿ ಸಂಚಲನ ಉಂಟಾಗಿದೆ. ಆಂತರಿಕ ಮಾಹಿತಿ ಪ್ರಕಾರ ರಾಜೀವ್ ಗೌಡ ಗೆಲುವು ಸಾಧಿಸುತ್ತಾರೆ ಎಂಬ ಮಾಹಿತಿ ಇದೆ. ಇನ್ನೊಂದೆಡೆ, ಐದೂ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಗ್ಯಾರಂಟಿ ನಮಗೆ ಶ್ರೀರಕ್ಷೆ ಆಗಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ನಗರದ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್)ದಲ್ಲಿ ನಡೆದ ಕಾಂಗ್ರೆಸ್‍ನ ಬೃಹತ್ ಸಮಾವೇಶದಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ಭೈರತಿ ಸುರೇಶ್ ಕಾಂಗ್ರೆಸ್ ನಾಯಕರು ಸಂವಿಧಾನದ ಪೀಠಿಕೆ ಓದುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಜತೆಗೆ, ಈ ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಉಪಸ್ಥಿತರಿದ್ದರು.

ಮನ್ಸೂರ್ ನಾಮಪತ್ರ ಸಲ್ಲಿಕೆ: ‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದರು. ಚುನಾವಣಾಧಿಕಾರಿ ಹರೀಶ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದ ಮನ್ಸೂರ್ ಅವರಿಗೆ ಶಾಸಕ ರಿಝ್ವಾನ್ ಆರ್ಶದ್, ಪರಿಷತ್ತು ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ನಾಗೇಶ್ ಸಾಥ್ ನೀಡಿದರು.

ನಾಳೆ ಉಮೇದುವಾರಿಕೆ: ‘ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ(ಎ.4) ಕೊನೆಯ ದಿನವಾಗಿದ್ದು, ರಾಜ್ಯದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಸೇರಿದಂತೆ ಘಟಾನುಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಎ.5ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಎ.8ಕ್ಕೆ ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News