ಪಕ್ಷ ಸಂಘಟನೆ ಮಾಡಿ ಮುಂದಿನ ಗೆಲುವಿಗೆ ಸಿದ್ಧರಾಗೋಣ : ರಾಹುಲ್ ಗಾಂಧಿ

Update: 2024-06-07 16:27 GMT

Photo : x/@siddaramaiah

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದ ಕಾಂಗ್ರೆಸ್ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ನಾವು ನಿರೀಕ್ಷಿಸಿದ ಫಲಿತಾಂಶ ಸಿಕ್ಕಿಲ್ಲ, ಈ ಕುರಿತು ಆತ್ಮಾವಲೋಕನ ನಡೆಸಿ, ಈಗಿನಿಂದಲೇ ಪಕ್ಷ ಸಂಘಟನೆ ಮಾಡಿ ಬಲಗೊಳಿಸುವ ಮುಖೇನ ಮುಂದಿನ ಗೆಲುವಿಗೆ ಸಿದ್ಧತೆ ನಡೆಸಬೇಕು ಎಂದು ವಿಜೇತ ಮತ್ತು ಪರಾಜಿತ ಅಭ್ಯರ್ಥಿಗಳಿಗೆ ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸದಸ್ಯರೊಂದಿಗೆ ಅವಲೋಕನ ಸಭೆ ನಡೆಸಿದ ಅವರು, ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳನ್ನು ವೈಯಕ್ತಿಕವಾಗಿ ಪರಿಚಯಿಸಿಕೊಂಡು ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಪರಾಜಿತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ನಮ್ಮ ನಿರೀಕ್ಷೆಗಿಂತ ಕಡಿಮೆ ಫಲಿತಾಂಶ ಬಂದಿದೆ. ಆದರೂ, ನಮ್ಮ ವೋಟ್ ಶೇರ್ ಹೆಚ್ಚಿದೆ. ಜೊತೆಗೆ ಮೋದಿ ಅವರ ಗೆಲುವಿನ ಓಟಕ್ಕೆ ತಡೆ ಹಾಕಿದ್ದೇವೆ. ಸಂವಿಧಾನದ ರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಹಾಗಾಗಿ ಸೋಲಿನಿಂದ ಧೃತಿಗೆಡದೆ ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ರಾಹುಲ್ ಗಾಂಧಿ ತಿಳಿಸಿದರು.

ಸೋತರೂ, ಗೆದ್ದರೂ ಕ್ಷೇತ್ರದಲ್ಲಿದ್ದು ಜನರ ಪರವಾಗಿ ಕೆಲಸ ಮಾಡಬೇಕು. ಸಂವಿಧಾನದ ರಕ್ಷಣೆಯ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗಿ ಹೋರಾಟ ನಡೆಸಬೇಕು. ಇದೀಗ ಅಧಿಕಾರ ಹಿಡಿಯಲು ಹೊರಟಿರುವ ಎನ್‍ಡಿಎ ಸರಕಾರ ಯಾವಾಗ ಬೇಕಾದರೂ ಪತನವಾಗುವ ಸಾಧ್ಯತೆ ಇದ್ದು ವಿಪಕ್ಷದಲ್ಲಿದ್ದು ಹೋರಾಟ ಮಾಡೋಣ ಎಂದು ರಾಹುಲ್ ಗಾಂಧಿ ಹುರಿದುಂಬಿಸಿದರು.

ಮೊದಲ ಬಾರಿಗೆ ಗೆದ್ದವರು ಕ್ಷೇತ್ರದಿಂದ ದೂರ ಉಳಿಯಬಾರದು. ಬೆಂಗಳೂರು ಹಾಗೂ ದಿಲ್ಲಿಗಿಂತ ಹೆಚ್ಚಾಗಿ ಕ್ಷೇತ್ರದ ಜನರ ಸಂಪರ್ಕದಲ್ಲಿ ಇರಬೇಕು. ನಮ್ಮದೇ ಸರಕಾರ ರಾಜ್ಯದಲ್ಲಿದ್ದು, ಅದರ ನೆರವು ಪಡೆದು ಜನರ ಪರವಾಗಿ ಕೆಲಸ ಮಾಡಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.

ಈ ಹಿಂದೆ ಇದ್ದ ಸಂಸದರ ಪೈಕಿ ಒಬ್ಬರ ಹೊರತಾಗಿ ಉಳಿದವರು ರಾಜ್ಯದ ಪರವಾಗಿ ಧ್ವನಿ ಎತ್ತಲಿಲ್ಲ. ತೆರಿಗೆ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು, ಭದ್ರ ಮೇಲ್ದಂಡೆ ಯೋಜನೆ ಅನುದಾನ, ಹಣಕಾಸು ಆಯೋಗದ ಅನುದಾನ, ಫೆರಿಫೆರಲ್ ರಿಂಗ್ ರಸ್ತೆ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಯೋಜನೆಗಳು ಹಾಗೂ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಧ್ವನಿ ಎತ್ತಬೇಕು. ರಾಜ್ಯಕ್ಕೆ ಹಾಗೂ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಶಾಸಕರು, ಸಂಸದರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News