ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರದ ಆರೋಪ : ಪತ್ರಕರ್ತನ ವಿರುದ್ಧ ಎಫ್‍ಐಆರ್ ದಾಖಲು

Update: 2024-06-16 15:06 GMT

ಬೆಂಗಳೂರು : ಸಂಸದ ರಾಹುಲ್ ಗಾಂಧಿ ಅವರ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಡಿ ಪತ್ರಕರ್ತ ಹಾಗೂ ಲೇಖಕ ಅಜೀತ್ ಭಾರತಿ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.

ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ಅವರು ನೀಡಿರುವ ದೂರಿನನ್ವಯ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 153ಎ ಹಾಗೂ 505(2) ಕಾಯ್ದೆಯಡಿ ಅಜೀತ್ ಭಾರತಿ ಅವರ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜೂ.6ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದ ಅಜೀತ್ ಭಾರತಿ, ‘ ಸಂಸದ ರಾಹುಲ್ ಗಾಂಧಿ ಅವರು ಶ್ರೀರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ' ಎಂದು ಹೇಳಿದ್ದಾರೆ.

ಆದರೆ, ರಾಹುಲ್ ಗಾಂಧಿಯವರು ತಮ್ಮ ಯಾವುದೇ ಭಾಷಣಗಳಲ್ಲಿ ಅಂತಹ ಯಾವುದೇ ಹೇಳಿಕೆ ನೀಡಿರುವುದಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ, ಅಜೀತ್ ಭಾರತಿಯವರು ಸುಳ್ಳು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕ ವ್ಯವಸ್ಥೆಯಲ್ಲಿ ಶಾಂತಿಯನ್ನು ಕದಡುವ ಮತ್ತು ಪ್ರಚೋದಿಸುವ ಸ್ಪಷ್ಟ ಉದ್ದೇಶದಿಂದ ಕೂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ದೂರಿನನ್ವಯ ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News