ಯಾದಗಿರಿ ಪಿಎಸ್ಸೈ ಪರಶುರಾಮ್ ಪತ್ನಿಗೆ ಸರಕಾರಿ ಉದ್ಯೋಗ : ಜಿ.ಪರಮೇಶ್ವರ್
ಬೆಂಗಳೂರು : ಯಾದಗಿರಿಯಲ್ಲಿ ಪಿಎಸ್ಸೈ ಸಾವು ಪ್ರಕರಣ ಸಂಬಂಧ ಪರಶುರಾಮ್ ಅವರ ಪತ್ನಿಗೆ ಸರಕಾರ ಉದ್ಯೋಗ ಕಲ್ಪಿಸುವ ಕುರಿತು ತೀರ್ಮಾನ ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಸೈ ಸಾವು ಪ್ರಕರಣ ಈಗಾಗಲೇ ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ಮೃತದೇಹ ಪರೀಕ್ಷೆಯ ವರದಿ ಬಳಿಕ ಮತ್ತಷ್ಟು ಮಾಹಿತಿ ತಿಳಿಯಲಿದು, ಆನಂತರ, ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಉದ್ಯೋಗ ನೀಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಎಐಸಿಸಿ ನಾಯಕರ ಸಭೆ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಕುರಿತು ಅನಾವಶ್ಯಕ ಆಪಾದನೆಗಳನ್ನು ಮಾಡಿ ವಿರೋಧ ಪಕ್ಷದವರು ಪಾದಯಾತ್ರೆ ಮಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಕೊಡಬೇಕೆಂದು ಹೇಳಿದ್ದು, ಪ್ರತಿಯೊಬ್ಬ ಸಚಿವರು ಅದರ ಬಗ್ಗೆ ಮಾತಾಡಬೇಕೆಂದು ಸೂಚಿಸಲಾಗಿದೆ ಎಂದರು.
ರಾಜ್ಯಪಾಲರು ಪ್ರಾಸಿಕ್ಯೂಷನ್‍ಗೆ ಅನುಮತಿ ಕೊಟ್ಟರೆ ಕಾನೂನು ಹೋರಾಟ ಮಾಡಲಾಗುವುದು. ಅಲ್ಲದೆ, ಸಚಿವ ಸಂಪುಟು ನಿರ್ಣಯವನ್ನು ರಾಜ್ಯಪಾಲರು ಒಪ್ಪುತ್ತಾರೆಂದು ನಮಗೆ ವಿಶ್ವಾಸ ಇದೆ ಎಂದ ಅವರು, ಸದ್ಯ ಸಚಿವರ ಬದಲಾವಣೆ, ಸಂಪುಟ ಪುನರ್ ರಚನೆ ಚರ್ಚೆ ಇಲ್ಲ. ಅದರ ಬಗ್ಗೆ ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ ಏನು ಮಾತನಾಡಿಲ್ಲ ಎಂದು ಮಾಹಿತಿ ನೀಡಿದರು.