ಅಧಿವೇಶನ | ‘ಯಕ್ಷಗಾನ’ ಅನುಮತಿ ಪ್ರಕ್ರಿಯೆ ಮತ್ತಷ್ಟು ಸರಳೀಕರಣ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-03-04 21:11 IST
ಅಧಿವೇಶನ | ‘ಯಕ್ಷಗಾನ’ ಅನುಮತಿ ಪ್ರಕ್ರಿಯೆ ಮತ್ತಷ್ಟು ಸರಳೀಕರಣ: ಡಿಸಿಎಂ ಡಿ.ಕೆ.ಶಿವಕುಮಾರ್
  • whatsapp icon

ಬೆಂಗಳೂರು : ಯಕ್ಷಗಾನ ನಮ್ಮ ಸಂಸ್ಕೃತಿ. ಇದಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು. ಯಾವುದೇ ಸಮಸ್ಯೆ ಇಲ್ಲದೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಣ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

ಮಂಗಳವಾರ ವಿಧಾನಸಭೆಯಲ್ಲಿ ಗಮನ ಸೆಳೆವ ಚರ್ಚೆ ವೇಳೆ ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿರುವ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಗೃಹ ಸಚಿವರ ಗಮನ ಸೆಳೆದರು. ಇದಕ್ಕೆ ಗೃಹ ಸಚಿವರ ಪರವಾಗಿ ಡಿಸಿಎಂ ಉತ್ತರ ನೀಡಿದರು.

ಯಕ್ಷಗಾನ ಪ್ರದರ್ಶನಕ್ಕೆ ಪೂರ್ವಾನುಮತಿ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸುನೀಲ್ ಕುಮಾರ್ ಪ್ರಸ್ತಾಪಿಸಿದ್ದಾರೆ. ಯಕ್ಷಗಾನ ಮಾಡುವಾಗ ಯಾರೂ ಇಂದು ಅರ್ಜಿ ಹಾಕಿ ನಾಳೆ ಯಕ್ಷಗಾನ ಪ್ರದರ್ಶನ ಮಾಡುವುದಿಲ್ಲ. ಅದಕ್ಕೆ 15 ದಿನಗಳ ತಯಾರಿ ಇರುತ್ತದೆ. ಬಿಜೆಪಿ ಕಾಲದಲ್ಲೂ ಕೆಲವು ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.

ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ಪಡೆಯಲು ಕಾಲಾವಕಾಶ ನೀಡಬೇಕು. ಯಕ್ಷಗಾನ ಬೆಳಗಿನ ಜಾವದವರೆಗೂ ನಡೆಯುವುದರಿಂದ ಮಧ್ಯರಾತ್ರಿಯೆ ನಿಲ್ಲಿಸಬೇಕು ಎಂದು ಯಾರೂ ಆಕ್ಷೇಪ ಮಾಡುವುದಿಲ್ಲ. ಈಗ ಆಗಿರುವ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಯಕ್ಷಗಾನ, ಬಯಲಾಟ ದೇಶದ ಆಸ್ತಿ. ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂಬುದು ನಮ್ಮ ಉದ್ದೇಶವಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಶಿವಕುಮಾರ್ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಸ್ಪೀಕರ್ ಯು.ಟಿ.ಖಾದರ್, ಮೊದಲು ಸಮಸ್ಯೆ ಇರಲಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಒಂದು ಆದೇಶ ಮಾಡಿದ ನಂತರ ಈ ರೀತಿ ಆಗಿದೆ. ಅಲ್ಲದೇ, ದಕ್ಷಿಣ ಜಿಲ್ಲೆಯಲ್ಲಿ ಅಂತಹ ಸಮಸ್ಯೆಯಿಲ್ಲ. ಉಡುಪಿ ಜಿಲ್ಲೆಯಲ್ಲಿ ಸಮಸ್ಯೆ ಇದೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಗೆ ಹೊಸ ಎಸ್.ಪಿ.ಗಳು ಬಂದಾಗ ಅವರದೇ ಆದ ಕಾನೂನುಗಳಿರುತ್ತವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News