ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಿಂದ ದೂರ ಮಾಡುತ್ತಿರುವ ನೂತನ ಪರೀಕ್ಷಾ ಪದ್ಧತಿ : ಪ್ರೊ.ನಿರಂಜನಾರಾಧ್ಯ ವಿ.ಪಿ.

Update: 2024-05-17 15:50 GMT

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಅನುಸರಿಸುತ್ತಿರುವ ನೂತನ ಪರೀಕ್ಷಾ ಪದ್ಧತಿಯಿಂದ ಪ್ರತಿವರ್ಷ ಮೂರರಿಂದ ನಾಲ್ಕು ಲಕ್ಷ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಯಿಂದ ಹೊರಗಿಟ್ಟಂತಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಕಳವಳ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಲಿಕಾರರಾಗಿಯೋ ಅಥವಾ ಅತ್ಯಲ್ಪ ಆರ್ಥಿಕ ಆದಾಯದಿಂದ ಈ ವ್ಯವಸ್ಥೆಯೊಳಗೆ ಭಾಗಿಗಳಾಗಿ ಸಮಾಜದಲ್ಲಿ ಜೀವನ ನಡೆಸುವಂತಾಗಿದೆ. ಅವರು ಮರಳಿ ಶಿಕ್ಷಣ ವ್ಯವಸ್ಥೆಗೆ ಬಂದಿದ್ದಾರೆ ಎಂಬ ಯಾವ ಪುರಾವೆಯೂ ಶಿಕ್ಷಣ ಇಲಾಖೆಯಲ್ಲಿಲ್ಲ. ಇದಕ್ಕೆ ಪರೀಕ್ಷಾ ಪದ್ಧತಿಯೇ ಪರೋಕ್ಷ ಕಾರಣವಾಗಿದೆ ಎಂದಿದ್ದಾರೆ.

ಪರೀಕ್ಷೆ ಕಟ್ಟುನಿಟ್ಟಾಗಿ, ಪಾರದರ್ಶಕವಾಗಿ ಮತ್ತು ಪಾವಿತ್ರ್ಯತೆಯಿಂದ ನಡೆಯಬೇಕು. ಆದರೆ ಪರೀಕ್ಷಾ ಪದ್ದತಿಯಷ್ಟೇ ಕಲಿಕಾ ವ್ಯವಸ್ಥೆಯು ಸುಧಾರಣೆ ಆಗಬೇಕು. ಕಲಿಕಾ ವ್ಯವಸ್ಥೆ ಸುಧಾರಣೆ ಆಗದ ಹೊರತು ಮಂಡಳಿಯ ಈ ಕ್ರಮ ಅನ್ಯಾಯವನ್ನು ಸಕ್ರಮಗೊಳಿಸಿದಂತಾಗುತ್ತದೆ. ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶದ ಸಂದರ್ಭದಲ್ಲಿ ಗ್ರೇಸ್ ಅಂಕಗಳ ಮೂಲಕ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಸುಧಾರಿಸಿದ ಬಗ್ಗೆ ಅಧಿಕಾರಿಗಳು ಸಾಧನೆ ಎಂಬ ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ ಅವರು ಹೇಳಿದ್ದಾರೆ.

ಮಂಡಲಿಯ ಈ ಬಾರಿಯ ಪರೀಕ್ಷಾ ವ್ಯವಸ್ಥೆಯಲ್ಲಿ ವೆಬ್ ಕಾಸ್ಟಿಂಗ್ ಕಠಿಣ ಮೇಲುಸ್ತುವಾರಿ ಇತ್ಯಾದಿ ಕ್ರಮಗಳ ಮೂಲಕ ನಡೆಯಬಹುದಾಗಿದೆ ಎಂಬ ಅಕ್ರಮಕ್ಕೆ ಕಡಿವಾಣವಾಗಿದೆ. ಒಂದು ರೀತಿಯಲ್ಲಿ ಈ ವೆಬ್ ಕಾಸ್ಟಿಂಗ್ ಎಂಬುದು ಮಕ್ಕಳನ್ನು ಅವಮಾನಿಸಿದಂತಿದೆ. ಈ ಬಾರಿಯ ಶೇ. ಫಲಿತಾಂಶ ಶೇ.54ಕ್ಕಿಂತ ಕಡಿಮೆ ದಾಖಲಿಸಿದ ಕಾರಣ, ಮಂಡಳಿಯು ಗ್ರೇಸ್ ಅಂಕಗಳನ್ನು ನೀಡಿ ಫಲಿತಾಂಶವನ್ನು ಏರಿಸಿದೆ ಎಂದಿದ್ದಾರೆ.

ಮೊದಲನೆಯದಾಗಿ ಈ ಗ್ರೇಸ್ ಏಕೆ?. ಈ ನಿರ್ದೇಶನ ನೀಡಿದವರು ಯಾರು?. ತಮ್ಮ ಗಮನಕ್ಕೆ ಬಂದಿತ್ತೆ?.ಒಂದು ಕ್ಷಣ ಗ್ರೇಸ್ ಒಪ್ಪುವುದಾದರು, ಅದರಲ್ಲಿ ತಾರತಮ್ಯ ಏಕೆ? ಈ ನಿಯಮದ ಬಗ್ಗೆ ಸಮಾಜಕ್ಕೆ, ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇಲಾಖೆ ತಿಳಿಸಿತ್ತೆ? ಇದು ನ್ಯಾಯ ಸಮ್ಮತವೇ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಮಂಡಳಿಯು ಗ್ರೇಸ್ ನೀಡುವುದು ಸಂವಿಧಾನ ಬಾಹಿರವಾಗಿದೆ. ಸಹಭಾಗಿತ್ವದ ಹೊಣೆಗಾರಿಕೆಯಿಲ್ಲದೆ ಪೋಷಕರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾರಕವಾದ ತೀರ್ಮಾನವನ್ನು ಮಂಡಳಿಯ ಅಧಿಕಾರಿಗಳು ಏಕ ಪಕ್ಷಿಯವಾಗಿ ಕೈಗೊಂಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಕೂಲಂಕುಷವಾಗಿ ಪರೀಶೀಲಿಸಿ, ಈಗ ಮಕ್ಕಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಮುಂದಿನ ದಾರಿ ಏನಾಗಬೇಕೆಂಬುದನ್ನು ಸಮಾಲೋಚಿಸಿ ತೀರ್ಮಾನಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News