ಮುಡಾ ಪ್ರಕರಣ | ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ : ಆರ್.ಅಶೋಕ್

Update: 2025-02-07 19:05 IST
Photo of R.Ashok

ಆರ್.ಅಶೋಕ್ 

  • whatsapp icon

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ಮತ್ತು ಈಡಿ ತನಿಖೆ ನಡೆಯುತ್ತಿದ್ದು, ಸದ್ಯಕ್ಕೆ ಸಿದ್ದರಾಮಯ್ಯಗೂ ನಿರಾಳರಾಗಿದ್ದಾರೆ. ಆದರೆ, ಲೂಟಿಯಾಗಿರುವ ಜನತೆಯ ಹಣ ಮತ್ತೆ ಖಜಾನೆಗೆ ವಾಪಸ್ ಬರುತ್ತದೆ ಎಂಬ ವಿಶ್ವಾಸವಿದೆ. ಹೈಕೋರ್ಟ್ ಆದೇಶವನ್ನು ನಾವು ಒಪ್ಪಲೇಬೇಕಾಗುತ್ತದೆ. ಸಿದ್ದರಾಮಯ್ಯ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

20 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಇದನ್ನು ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಸುಭದ್ರವಾಗಿರಬೇಕಾದರೆ ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ಆದರೆ ರಾಜ್ಯದಲ್ಲಿ ಬ್ಯಾಂಕ್ ದರೋಡೆಗಳು, ಗೋವುಗಳ ಕೆಚ್ಚಲು ಕೊಯ್ಯುವುದು, ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿವೆ. ಕಾನೂನು ಸುವವ್ಯಸ್ಥೆ ಹದಗೆಟ್ಟು ಹೋಗಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ದೊಡ್ಡ ಸಮಾವೇಶನ ಮಾಡಲು ಹಣ ಎಲ್ಲಿಂದ ಬಂತು? ಬ್ಯಾನರ್, ಬಸ್, ಊಟಕ್ಕೆ ದುಡ್ಡು ಎಲ್ಲಿಂದ? ಶೇ.60ರಷ್ಟು ಕಮಿಷನ್ ಹಣವನ್ನು ಸರಕಾರ ಬೆಳಗಾವಿ ಅಧಿವೇಶನಕ್ಕೆ ಬಳಕೆ ಮಾಡಿದೆ. ಆರು ತಿಂಗಳಿಗೊಮ್ಮೆ ಬಜೆಟ್ ಮಾಡಿ ಮತ್ತೆ ಬೆಲೆ ಏರಿಕೆ ಮಾಡುತ್ತಾರೆ ಎಂದು ಅಶೋಕ್ ದೂರಿದರು.

ಬಿಜೆಪಿ ಅವಧಿಯಲ್ಲಿ 25 ಸಾವಿರ ಕೋಟಿ ರೂ.ಗಳಷ್ಟು ಸಾಲ ಪಡೆಯಲು ಅವಕಾಶವಿದ್ದರೂ ಜನರ ಮೇಲೆ ಹೊರೆಯಾಗಬಾರದು ಎಂದು ಸಾಲ ತೆಗೆದುಕೊಂಡಿಲ್ಲ. ಆದರೆ ಕಾಂಗ್ರೆಸ್ ಸಾಲಗಾರರ ರಾಜ್ಯ ಮಾಡಲು ಹೊರಟಿದ್ದಾರೆ. ಹೀಗೆ ಮಾಡಿದರೆ ಕೇರಳದಂತೆ ಭಿಕ್ಷೆ ಬೇಡುವ ಸ್ಥಿತಿ ಬರಲಿದೆ. ಸಿದ್ದರಾಮಯ್ಯ ನವೆಂಬರ್‌ ನಲ್ಲಿ ಸಿಎಂ ಸ್ಥಾನ ಬಿಡಬೇಕಾಗಬಹುದು. ಹಾಗಾಗಿ ಅವರಿಗೂ ಆಸಕ್ತಿ ಇಲ್ಲ. ಹೀಗಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಟೀಕಿಸಿದರು.

‘ಬಿಜೆಪಿಯಲ್ಲಿನ ಆಂತರಿಕ ವಿಚಾರವನ್ನು ನಾಲ್ಕು ಗೋಡೆಗಳ ಮಧ್ಯೆ ಪ್ರಸ್ತಾಪಿಸಬೇಕು. ನಾವೆಲ್ಲರೂ ಒಟ್ಟಿಗೆ ಹೋರಾಟ ಮಾಡಿದರೆ ಕಾಂಗ್ರೆಸ್ ಸರಕಾರವನ್ನು ಬಗ್ಗು ಬಡಿಯಬಹುದಾಗಿತ್ತು. 15-20 ದಿನಗಳಲ್ಲಿ ವರಿಷ್ಠರು ಎಲ್ಲವನ್ನು ಸರಿ ಮಾಡಲಿದ್ದಾರೆ. ಮಾತಿನ ಸ್ವಾತಂತ್ರ್ಯ ಇರುವ ಕಾರಣ ಎಲ್ಲರೂ ಮಾತಾಡಲು ಆರಂಭಿಸಿದ್ದಾರೆ. ಸಂಬಂಧಪಟ್ಟವರು ಎಲ್ಲವನ್ನು ಸರಿಪಡಿಸಿಕೊಂಡು ಹೋಗಬೇಕು’

-ಆರ್.ಅಶೋಕ್ ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News