ಕಾಂಗ್ರೆಸ್‌ ಸರಕಾರ ಪ್ರಕರಣ ವಾಪಸ್‌ ಪಡೆಯುವುದರಿಂದಾಗಿ ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಬಂದಿದೆ : ಆರ್‌.ಅಶೋಕ್‌

Update: 2025-02-11 15:40 IST
ಕಾಂಗ್ರೆಸ್‌ ಸರಕಾರ ಪ್ರಕರಣ ವಾಪಸ್‌ ಪಡೆಯುವುದರಿಂದಾಗಿ ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಬಂದಿದೆ : ಆರ್‌.ಅಶೋಕ್‌
  • whatsapp icon

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮುಸ್ಲಿಂ ಮತಾಂಧರ ವಿರುದ್ಧ ಪ್ರಕರಣ ವಾಪಸ್‌ ಪಡೆಯುವುದರಿಂದಾಗಿ, ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಮತಾಂಧರಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ. ಹುಬ್ಬಳ್ಳಿಯಲ್ಲಿ ಆದಂತೆಯೇ ಮೈಸೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಬಗ್ಗೆ ಪೋಸ್ಟ್‌ ಮಾಡಿದ್ದಾರೆಂಬ ಕಾರಣಕ್ಕೆ ಮತಾಂಧ ಮುಸ್ಲಿಮರು ನಿನ್ನೆ ಸಂಜೆ 6-7 ಗಂಟೆ ಸಮಯದಲ್ಲಿ ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹಿಂದೂ ಸಮುದಾಯದ ಜನರಿಗೆ ಬೆದರಿಕೆ ಹಾಕಿದ್ದು, ಇಡೀ ಮೈಸೂರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಇದ್ದ ಪ್ರಕರಣಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಪಸ್‌ ಪಡೆದಿರುವುದರಿಂದ ಮುಸ್ಲಿಮ್‌ ಮತಾಂಧರಿಗೆ ಧೈರ್ಯ ಬಂದಿದೆ. ಜೊತೆಗೆ ಡಿ.ಕೆ.ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು, ಇದು ಮುಸ್ಲಿಮರ ಸರಕಾರ ಎಂದು ಹೇಳಿರುವುದರಿಂದ ಪೊಲೀಸ್‌ ಠಾಣೆಯನ್ನು ಧ್ವಂಸ ಮಾಡಬಹುದು ಎಂಬ ವಿಶ್ವಾಸ ಅವರಿಗೆ ಬಂದಿದೆ. ಒಂದಡೆ ಆರ್ಥಿಕ ದುಸ್ಥಿತಿ ಇದ್ದರೆ, ಮತ್ತೊಂದೆಡೆ ಕಾನೂನು ಹದಗೆಟ್ಟಿದೆ. ಈಗ ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಿದರೂ, ಅದು ವ್ಯರ್ಥ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರ ಬಗ್ಗೆ ಭಯವೇ ಇಲ್ಲವೆಂದರೆ ಕಾನೂನು ಸತ್ತಿದೆ ಎಂದರ್ಥ. ಮತಬ್ಯಾಂಕ್‌ಗಾಗಿ ಇಡೀ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ ಎಂದರು.

ಮೈಸೂರಿನ ಹಿಂದೂಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಮೈಸೂರಿನ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆಗೆ ಈಗಾಗಲೇ ಮಾತಾಡಿದ್ದೇನೆ. ಪೊಲೀಸರು ಕೈ ಚೆಲ್ಲಿ ಕುಳಿತಿರುವುದರಿಂದ ನಾವೇ ಶಾಂತಿ ಕಾಪಾಡಬೇಕಾಗಿದೆ. ನಾನು ಕೂಡ ಮೈಸೂರಿಗೆ ಭೇಟಿ ನೀಡುತ್ತೇನೆ. ಕೆಎಫ್‌ಡಿ, ಪಾಪ್ಯುಲರ್‌ ಫ್ರಂಟ್‌ ಮೊದಲಾದ ಸಂಘಟನೆಗಳು ಮೈಸೂರಿನಲ್ಲಿ ಸಕ್ರಿಯವಾಗಿವೆ. ಕೇರಳದಿಂದ ಬಂದು ಕೊಲೆ, ಅಪಹರಣ ಮಾಡಿ ಹೋಗಿರುವ ಘಟನೆಗಳು ನಡೆದಿವೆ ಎಂದರು.

ಕಾಂಗ್ರೆಸ್‌ ಶಾಸಕರಿಗೆ ಆದಾಯವಿಲ್ಲ :

ಕಾಂಗ್ರೆಸ್‌ ಶಾಸಕರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ವರ್ಗಾವಣೆ, ಮರಳು ಮಾಫಿಯಾ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಭದ್ರಾವತಿಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಬೇರೆ ಜಿಲ್ಲೆಗಳಲ್ಲೂ ಅಧಿಕಾರಿಗಳಿಗೆ ಕಾಂಗ್ರೆಸ್‌ ಶಾಸಕರಿಂದ ಬೆದರಿಕೆ ಇದೆ. ಮಂಡ್ಯ, ಬೀದರ್‌, ಯಾದಗಿರಿ ಮೊದಲಾದ ಕಡೆ ಮರಳು ಮಾಫಿಯಾ ನಡೆಯುತ್ತಿದೆ. ಭದ್ರಾವತಿಯ ಮಹಿಳಾ ಅಧಿಕಾರಿ ರೆಕಾರ್ಡ್‌ ಮಾಡಿಕೊಂಡು ಧೈರ್ಯವಾಗಿ ಹೇಳಿದ್ದಾರೆ. ಉಳಿದ ಜಿಲ್ಲೆಗಳ ಅಧಿಕಾರಿಗಳು ವರ್ಗಾವಣೆ ಭಯದಿಂದ ಸುಮ್ಮನಾಗಿದ್ದಾರೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News