ಮುಡಾ ಪ್ರಕರಣ | ಉಪ್ಪು ತಿಂದ ಸಿದ್ದರಾಮಯ್ಯ ನೀರು ಕುಡಿಯಲೇಬೇಕು: ಆರ್.ಅಶೋಕ್

Update: 2025-02-19 19:01 IST
Photo of R.Ashok

ಆರ್.ಅಶೋಕ್

  • whatsapp icon

ಬೆಂಗಳೂರು : ‘ನ್ಯಾಯಾಲಯಕ್ಕೆ ಸಂಪೂರ್ಣ ಸಾಕ್ಷ್ಯ ಒದಗಿಸದೆ ಪ್ರಕರಣವನ್ನ ಮುಚ್ಚಿಹಾಕಿ ಸತ್ಯದ ಸಮಾಧಿ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ. ಇಂದಲ್ಲ ನಾಳೆ, ಉಪ್ಪು ತಿಂದ ಸಿದ್ದರಾಮಯ್ಯನವರು ನೀರು ಕುಡಿಯಲೇಬೇಕು’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅಶೋಕ್, ‘ಮುಡಾ ಹಗರಣದಲ್ಲಿ ನಡೆಸಲಾಗಿರುವ ಲೋಕಾಯುಕ್ತ ತನಿಖೆಯು ಸಿದ್ದರಾಮಯ್ಯರಿಂದ, ಸಿದ್ದರಾಮಯ್ಯರಿಗಾಗಿ, ಸಿದ್ದರಾಮಯ್ಯರಿಗೋಸ್ಕರ ನಡೆಸಿದ ತನಿಖೆಯಾಗಿದ್ದು, ಇದರಲ್ಲಿ ನ್ಯಾಯ ಸಿಕ್ಕುತ್ತದೆ ಎನ್ನುವ ಭರವಸೆ ಯಾರಿಗೂ ಇರಲಿಲ್ಲ ಎಂದು ಟೀಕಿಸಿದ್ದಾರೆ.

‘ಮುಡಾ ಹಗರಣದಲ್ಲಿ ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಕಾಂಗ್ರೆಸ್ ಶಾಸಕರು ಆರೋಪಿ ಸಿದ್ದರಾಮಯ್ಯ ಹಾಗು ಅವರ ಧರ್ಮಪತ್ನಿ ಅವರಿಗೆ ಕ್ಲೀನ್‍ಚಿಟ್ ನೀಡಿದ್ದರು. ಇದನ್ನೇ ಲೋಕಾಯುಕ್ತ ಪೋಲೀಸರೂ ಸ್ವಲ್ಪ ತಡವಾಗಿ ‘ಬಿ ರಿಪೋರ್ಟ್' ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

‘ಒಂದು ದಿನ ನೆಪಮಾತ್ರಕ್ಕೆ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅವರ ಪತ್ನಿ ಅವರನ್ನು ವಿಚಾರಣೆ ನಡೆಸಿ ಕ್ಲೀನ್‍ಚಿಟ್ ನೀಡಿರುವುದು ರಾಜ್ಯ ಕಂಡ ‘ಐತಿಹಾಸಿಕ ದುರಂತ'. ಭ್ರಷ್ಟ ಕಾಂಗ್ರೆಸ್ ಸರಕಾರದಲ್ಲಿ ‘ನ್ಯಾಯ' ಮಣ್ಣುಪಾಲಾಗಿದೆ. ಸಮರ್ಪಕ ತನಿಖೆಯನ್ನೇ ನಡೆಸದೆ ಕ್ಲೀನ್‍ಚಿಟ್ ನೀಡಿ ‘ನ್ಯಾಯದ ಸಮಾಧಿ' ಮಾಡಿದೆ ಈ ದುಷ್ಟ ಕಾಂಗ್ರೆಸ್ ಸರಕಾರ’ ಎಂದು ಅಶೋಕ್ ಆರೋಪಿಸಿದ್ದಾರೆ.

ಬಿಜೆಪಿ ಹೋರಾಟ ನಿಲ್ಲದು: ‘ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‍ಚಿಟ್ ನೀಡಲು ಲೋಕಾಯುಕ್ತ ಮುಂದಾಗಿದೆ. ಪೂರ್ವ ನಿಯೋಜಿತವಾಗಿ ತನಿಖಾ ವರದಿ ರೂಪಿಸಲಾಗಿದೆ. ಆದರೆ, ಬಿಜೆಪಿಯಿಂದ ಹೋರಾಟ ಮುಂದುವರಿಯಲಿದೆ. ಈ ಹಗರಣದಲ್ಲಿ ತಪ್ಪಿಲ್ಲ ಎಂದಾದರೆ ಸಿದ್ದರಾಮಯ್ಯನವರು ನಿವೇಶನಗಳನ್ನು ಯಾಕೆ ಮರಳಿಸಬೇಕಿತ್ತು? ಲೇಔಟ್ ಮಾಡಿರುವುದೇ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ಅವರು ಅಷ್ಟು ಪ್ರಾಮಾಣಿಕರು ಹಾಗೂ ಸಭ್ಯಸ್ತರು. ಇದು ಪೂರ್ವ ನಿಯೋಜಿತವಾಗಿ ತಯಾರಿಸಿದ ವರದಿ’

-ಆರ್.ಅಶೋಕ್, ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News