ಹತ್ತು ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ : ಎಚ್‌ಡಿಕೆ

Update: 2024-11-12 17:47 GMT

ಬೆಂಗಳೂರು : ‘ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಬಹುದೊಡ್ಡ ಕ್ರಾಂತಿ ಆಗಿದೆ’ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಘಟಿಕೋತ್ಸವದಲ್ಲಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಂಡಿದೆ. ಶ್ರೀಸಾಮಾನ್ಯನಿಗೂ ಸುಲಭ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ಪ್ರಧಾನಿ ಸಾಮಾಜಿಕ ಕಾಳಜಿ ಹಾಗೂ ದೂರದೃಷ್ಟಿಯಿಂದ ಇದು ಸಾಧ್ಯವಾಗಿದೆ ಎಂದು ಬಣ್ಣಿಸಿದರು.

ಮೋದಿ ನಾಯಕತ್ವದಲ್ಲಿ ನಮ್ಮ ದೇಶದಲ್ಲಿ ಆರೋಗ್ಯ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿ ಬೆಳೆದಿದ್ದು, ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ. ಈಗ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಗುಣಮಟ್ಟದ ವೈದ್ಯ ಸೇವೆ ದೊರೆಯುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳು ಜಾರಿಗೆ ಬಂದಿವೆ.

ಅದರಲ್ಲಿ ಆಯುಷ್ಮಾಮನ್ ಭಾರತ್ ಯೋಜನೆಯು ಒಂದು. ಇದು ಜಗತ್ತಿನಲ್ಲಿಯೇ ಅತಿದೊಡ್ಡ ಆರೋಗ್ಯ ಸೇವಾ ಯೋಜನೆ. ದೇಶದ 500ದಶಲಕ್ಷ ಜನರು ಆರೋಗ್ಯ ವಿಮೆ ವ್ಯಾಪ್ತಿಗೆ ಬಂದಿದ್ದಾರೆ. ಜತೆಗೆ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಪಿಎಂ ಆತ್ಮನಿರ್ಭರ್ ಸ್ವಾಸ್ಥ ಭಾರತ್ ಯೋಜನೆ, ಡಿಜಿಟಲ್ ಆರೋಗ್ಯ ಮಿಷನ್, ಮಿಶನ್ ಇಂದ್ರಧನುಷ್, ಜನೌಷಧಿ ಕೇಂದ್ರಗಳ ಸ್ಥಾಪನೆ ಸಹಿತ ಅನೇಕ ಸರಿಸಾಟಿ ಇಲ್ಲದ ಕಾರ್ಯಕ್ರಮಗಳನ್ನು ಮೋದಿ ಸರಕಾರ ಜಾರಿ ಮಾಡಿದೆ ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರ ಮಹತ್ವದ್ದು, ಶ್ರೇಷ್ಠವಾದದ್ದು ಆಗಿದ್ದು, ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯವನ್ನೇ ಅಲ್ಲ, ಇಡೀ ದೇಶದ ಆರೋಗ್ಯ ಕಾಪಾಡುತ್ತಾರೆ. ಈ ದಿನ ವೈದ್ಯ ಪದವಿ ಪಡೆಯುತ್ತಿರುವ ಎಲ್ಲರೂ ಭವಿಷ್ಯದಲ್ಲಿ ಉತ್ತಮ ವೈದ್ಯರಾಗಿ ಸಮಾಜಮುಖಿ ಸೇವೆ ಮಾಡಬೇಕು ಎಂದು ಅವರು ಮನವಿ ಮಾಡಿದರು. ಕಾಲೇಜಿನ ಸಂಸ್ಥಾಪಕ ಕುಲಪತಿ ಡಾ.ಎ.ಸಿ.ಷಣ್ಮುಗಂ, ಅಧ್ಯಕ್ಷ ಅರುಣ್ ಕುಮಾರ್, ಡೀನ್ ಡಾ. ಸತ್ಯಮೂರ್ತಿ, ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ವಿಜಯಾನಂದ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News