ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆಗೆ 2,59,476 ಮತಗಳ ಅಂತರದಿಂದ ಜಯ

Update: 2024-06-04 14:11 GMT

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪಕ್ಷದ ಆಂತರಿಕ ಸಮಸ್ಯೆ, ಗೊಂದಲಗಳ ಕಾರಣದಿಂದಾಗಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಅಭ್ಯರ್ಥಿ ಶೋಭಾ ಕರಂದ್ಲಾಜೆ 2,59,476 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರೊ.ರಾಜೀವ್ ಗೌಡ ಸ್ಪರ್ಧಿಸಿದ್ದು, ಸ್ವಾತಂತ್ರ್ಯ ಹೋರಾಟಗಾರರ ಮನೆತನ, ಪ್ರತಿಷ್ಠಿತ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ಮತ ಎಣಿಕೆ ಆರಂಭದಿಂದಲೂ ಮುನ್ನಡೆಯನ್ನು ಸಾಧಿಸಿದ್ದ ಶೋಭಾ ಕರಂದ್ಲಾಜೆ ಒಟ್ಟು 9,86,049 ಮತಗಳು ಬಂದಿದ್ದರೆ, ರಾಜೀವ್ ಗೌಡ ಅವರಿಗೆ ಒಟ್ಟು 7,26,573 ಮತಗಳು ಲಭಿಸಿವೆ. ನೋಟಾಗೆ 13,554 ಮತಗಳು ಬಿದ್ದಿವೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್. ಪುರ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ ಸೇರಿ 8 ವಿಧಾನಸಭೆ ಕ್ಷೇತ್ರಗಳು ಬರಲಿವೆ. ಈ ಕ್ಷೇತ್ರಕ್ಕೆ ಎ.26 ರಂದು ನಡೆದ ಚುನಾವಣೆಯಲ್ಲಿ ಶೇ.54.6 ಮತದಾನ ದಾಖಲಾಗಿದ್ದು, ಒಟ್ಟು 32,15,261 ಮತದಾರರಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಿಜೆಪಿ ನಾಲ್ಕು ಅವಧಿಯಲ್ಲೂ ಜಯ ಸಾಧಿಸಿತ್ತು. ಸಿ.ಕೆ.ಜಾಫರ್ ಶರೀಫ್ ಅವರನ್ನು 7 ಬಾರಿ ಈ ಕ್ಷೇತ್ರದ ಮತದಾರರು ಗೆಲ್ಲಿಸಿ ಸಂಸತ್‍ಗೆ ಕಳುಹಿಸಿದ್ದರು.

ಇಲ್ಲಿ ಮೊದಲ ಎರಡು ಚುನಾವಣೆ ಹೊರತುಪಡಿಸಿ ಉಳಿದ ಚುನಾವಣೆಗಳಲ್ಲಿ ಗೆದ್ದವರೆಲ್ಲ ಕ್ಷೇತ್ರದ ಹೊರಗಿನವರೇ ಎಂಬುದು ವಿಶೇಷವಾಗಿದೆ. ಈ ಹಿಂದೆ ಇದು ಕಾಂಗ್ರೆಸ್‍ನ ಭದ್ರಕೋಟೆಯಾಗಿತ್ತು. ಆದರೆ, ಈಗ ಬಿಜೆಪಿಯ ಭದ್ರಕೋಟೆಯಾಗಿ ಬದಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News