ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್: ಬಿ.ವೈ.ವಿಜಯೇಂದ್ರ ಟೀಕೆ

Update: 2024-02-16 08:59 GMT

ಬೆಂಗಳೂರು, ಫೆ.16: ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಇಂದು ಮಂಡಿಸಿದ ಬಜೆಟ್ ರೈತ ವಿರೋಧಿ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಶೂನ್ಯ ಪ್ರಗತಿಯ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯವನ್ನು 20 ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್ ಇದು ಎಂದು ಟೀಕಿಸಿದರು. ಯುವಕರಿಗೆ ಯಾವುದೇ ಒಂದು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಘೋಷಣೆ ಮಾಡಿಲ್ಲ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮತ್ತು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಇವತ್ತು ಸಿದ್ದರಾಮಯ್ಯ ತಮ್ಮ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಆಪಾದಿಸಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ರೂಪಾಯಿ ಇಲ್ಲ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಡದ ಬಜೆಟ್ ಇದಾಗಿದೆ. ಸಂಕಷ್ಟದಲ್ಲಿರುವ ರೈತರು ಬಜೆಟ್ ಮೂಲಕ ಪರಿಹಾರದ ನಿರೀಕ್ಷೆಯಲ್ಲಿದ್ದರು. ಇದರಡಿ ಮಹಿಳೆಯರಿಗೂ ಅನುಕೂಲ ಆಗುವುದಿಲ್ಲ. ಇವರು ತಮ್ಮ ಪ್ರಣಾಳಿಕೆಯಲ್ಲಿ ನೇಕಾರರ ಬಗ್ಗೆ ಮಾತನಾಡಿದ್ದರು. ನೇಕಾರರ ಪರವಾಗಿ ಯಾವುದೇ ಒಂದು ಯೋಜನೆಯನ್ನು ಘೋಷಣೆ ಮಾಡಿಲ್ಲ. ಯೋಜನೆ ಘೋಷಿಸುವುದು ಇರಲಿ; ಆ ನೇಕಾರರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ವಿಜಯೇಂದ್ರ ಟೀಕಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಉಲ್ಲೇಖ ಮಾಡಿಲ್ಲ. ರಾಜ್ಯದ ರೈತರು, ಬಡವರು, ದೀನದಲಿತರು, ನೇಕಾರರು, ಪರಿಶಿಷ್ಟ ಜಾತಿ- ಪಂಗಡ ಸೇರಿ ಎಲ್ಲ ವರ್ಗಕ್ಕೂ ನಿರಾಸೆ ಮೂಡಿಸಿದ ಬಜೆಟ್ ಇದು ಎಂದು ಹೇಳಿದರು.

ಬರಗಾಲದ ಸಂದರ್ಭದಲ್ಲೂ ಕೃಷಿ ಮತ್ತು ಬೆಳೆ ಸಾಲದ ಮನ್ನಾ ಕುರಿತು ಉಲ್ಲೇಖ ಮಾಡಿಲ್ಲ. ಸರಕಾರಿ ನೌಕರರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಇವರು ಮಾಡಿದ್ದಾರೆ. ಬರಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ಅನುಕೂಲ ಆಗದ ಬಜೆಟ್, ನಿಶ್ಚಿತವಾಗಿ ಇದು ಕರಾಳ ದಿನ ಎಂದರೂ ತಪ್ಪಾಗಲಾರದು ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News