ಬೀದರ್ | ನೀರಿನ ಸಮಸ್ಯೆ ಬಗೆಹರಿಸಲು ವಿಫಲವಾದ ಪಂಚಾಯತ್ ಸದಸ್ಯರನ್ನು ಕೂಡಿ ಹಾಕಿದ ಗ್ರಾಮಸ್ಥರು

ಬೀದರ್ : ನೀರಿನ ಸಮಸ್ಯೆ ಬಗೆಹರಿಸಲು ವಿಫಲವಾದ ಪಂಚಾಯತ್ ಸದಸ್ಯರನ್ನು ಗ್ರಾಮಸ್ಥರು ಪಂಚಾಯತ್ ಕಚೇರಿಯಲ್ಲಿಯೇ ಕೂಡಿ ಹಾಕಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ಏಕಲೂರ್ ಪಂಚಾಯತ್‌ನಲ್ಲಿ ನಡೆದಿದೆ.
ಗ್ರಾಮದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಫಲವಾದ ಏಕಲೂರು ಗ್ರಾಮ ಪಂಚಾಯತ್ ಸದಸ್ಯರನ್ನು ಇಂದು ಪಂಚಾಯತ್ ಕಚೇರಿಯಲ್ಲಿ ಕೂಡಿ ಹಾಕಿ ಜನರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗನ್ನಾಥ್ ದೋಮ್ಮೆ, ಕಲ್ಯಾಣರಾವ ಮುಡಬೆ, ತುಳಸಿರಾಮ ಕಾಂಬಳೆ ಹಾಗೂ ಮಹಿಳಾ ಸದಸ್ಯರ ಕುಟುಂಬಸ್ಥರಾದ ದೇವೇಂದ್ರ ಶಿಂಧೆ, ಸಂಜುಕುಮಾರ್ ದೊಮ್ಮೆ, ಮಲ್ಲಿನಾಥ್ ಮಾಲಿಪಾಟೀಲ್ ಎನ್ನುವರನ್ನು ಗ್ರಾಮಸ್ಥರು ಕೂಡಿ ಹಾಕಿದ್ದಾರೆ.
ಗ್ರಾಮದಲ್ಲಿ ವಾರಕ್ಕೊಮ್ಮೆಯೂ ಸಹ ಕುಡಿಯುವ ನೀರು ಸಿಗುತ್ತಿಲ್ಲ. ನೀರಿನ ಸಮಸ್ಯೆ ಬಗೆಹರಿಸಲು ಸದಸ್ಯರು ಕಾಳಜಿ ವಹಿಸುತ್ತಿಲ್ಲ ಎಂದು ದೂರಿದರು.
ಮುಂದಿನ ಒಂದು ವಾರದ ಒಳಗಾಗಿ ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಭರವಸೆ ನೀಡಿದ ನಂತರ ಕೂಡಿ ಹಾಕಿದ ಪಂಚಾಯತ್ ಸದಸ್ಯರನ್ನು ಜನರು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.