ಬೀದರ್ | ಒಂದು ವರ್ಷದಲ್ಲಿ ನೂತನ ಅನುಭವ ಮಂಟಪ ಕಾಮಗಾರಿ ಪೂರ್ಣಗೊಳಿಸುವ ತೀರ್ಮಾನ : ಸಚಿವ ಈಶ್ವರ ಖಂಡ್ರೆ
ಬೀದರ್ : ಮುಂದಿನ ಒಂದು ವರ್ಷದಲ್ಲಿ ನೂತನ ಅನುಭವ ಮಂಟಪ ಕಟ್ಟಡದ ಕಾರ್ಯ ಪೂರ್ಣಗೊಳಿಸುವ ತೀರ್ಮಾನ ಮಾಡಿದ್ದೇವೆ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಬಸವ ಕಲ್ಯಾಣದಲ್ಲಿ ನಡೆದ ನೂತನ ಅನುಭವ ಮಂಟಪದ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಈ ಸಭೆಯಲ್ಲಿ ಸಾಹಿತ್ಯದ, ಕಟ್ಟಡದ ಲೋಕಾರ್ಪಣೆಯ ಬಗ್ಗೆ ಹಾಗೆಯೇ ಮುಂದಿನ ದಿನಗಳಲ್ಲಿ ಯಾವ ವೇಗದಿಂದ ಕಟ್ಟಡವನ್ನು ಕಟ್ಟಬೇಕು ಎಂದು ಚರ್ಚೆ ಮಾಡಿದ್ದೇವೆ. ಅನುಭವ ಮಂಟಪವನ್ನು ಕಾಲಮಿತಿಯೊಳಗೆ ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ನೂತನ ಅನುಭವ ಮಂಟಪದ ಕಟ್ಟಡಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ಕೇಳುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಇನ್ನೊಂದು ಸಭೆ ನಡೆಸಿ ನೂತನ ಅನುಭವ ಮಂಟಪದ ಕಾರ್ಯ ಮತ್ತು ಲೋಕಾರ್ಪಣೆ ಬಗ್ಗೆ ಚರ್ಚಿಸುತ್ತೇವೆ ಎನ್ನುವ ಮಾಹಿತಿ ನೀಡಿದರು.
ತಜ್ಞರ ಸಮಿತಿಯ ಅಧ್ಯಕ್ಷರಾದ ಗುರು ಚನ್ನಬಸಪ್ಪನವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗ ಪಟ್ಟದೇವರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು.