ಬೀದರ್: ದಲಿತ ಸಂಘರ್ಷ ಸಮಿತಿಯಿಂದ ನ.6 ರಂದು ಅರೆಬೆತ್ತಲೆ ಮೆರವಣಿಗೆ
ಬೀದರ: ಕೇಂದ್ರ ಬಿಜೆಪಿ ಸರಕಾರ ಸಂವಿಧಾನ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡು ಮುಡಾ ಹಗರಣ ಆರೋಪವನ್ನು ಹೊರೆಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರವನ್ನು ದುರ್ಬಲಗೊಳಿಸಲು ನಡೆಸಿರುವ ಷಡ್ಯಂತ್ರ ಖಂಡಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಜಿಲ್ಲಾ ಸಮಿತಿ ವತಿಯಿಂದ ನ. 6 ರಂದು ಅರೆ ಬೆತ್ತಲೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11:30 ಗಂಟೆಗೆ ಇಲ್ಲಿನ ಅಂಬೇಡ್ಕರ್ ಭವನ ಜನವಾಡ ರಸ್ತೆ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಅರೆ ಬೆತ್ತಲೆ ಮೆರವಣಿಗೆ ನಡೆಸಿ ಸಂವಿಧಾನಿಕ ಸಂಸ್ಥೆಗಳಾದ ಇಡಿ., ಐ.ಟಿ., ಸಿಬಿಐ ರಾಜಭವನಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಆಗ್ರಹಿಸಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಗಳು ಅಪರಾಧಗಳ ತನಿಖಾ ಸಂಸ್ಥೆಗಳಿಗಾಗಿ ಉಳಿಯಬೇಕು, ನೈತಿಕತೆ ಎಂಬ ಗೂಟಕ್ಕೆ ಕಟ್ಟಿ ಬಲಿ ಹಾಕುವ ರಾಜಕೀಯ ಸಂಚಿಗೆ ಸಿದ್ಧರಾಮಯ್ಯನವರು ಒಳಗಾಗದಂತೆ ಪ್ರಜಾಪ್ರಭುತ್ವವಾದಿಗಳು ಜಾಗೃತವಾಗಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ “ಅರೆ ಬೆತ್ತಲೆ ಮೆರವಣಿಗೆ” ನಡೆಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರತಿಭಟನೆಯಲ್ಲಿ ನಾಡಿನ ಸಮಸ್ತ ನಾಗೀಕರು ಮತ್ತು ಪ್ರಗತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಐತಿಹಾಸಿಕ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಸಂಘಟನಾ ಸಂಚಾಲಕರಾದ ರಾಜಕುಮಾರ ವಾಘಮಾರೆ ಹಾಗೂ ಜಿಲ್ಲಾ ಸಂಚಾಲಕರಾದ ಅರುಣ ಪಟೇಲ್ ಅವರು ಮನವಿ ಮಾಡಿದ್ದಾರೆ.