ಬೀದರ್ | ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಸಾಧನೆಯ ಶಿಖರ ಹತ್ತಿಸಬಹುದು : ಡಾ.ಬಸವಲಿಂಗ ಪಟ್ಟದ್ದೇವರು

ಬೀದರ್ : ಶಾಲೆಯ ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳಿಗೆ ಸಾಧನೆಯ ಶಿಖರ ಹತ್ತಿಸಬಹುದು. ಆವಾಗ ಮಕ್ಕಳು ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಕಮಲನಗರ್ ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳು 10ನೇ ತರಗತಿ ಮುಗಿದ ನಂತರ ಪಿಯುಸಿ ವರೆಗೆ ಮೂರು ವರ್ಷ ಪರಿಶ್ರಮ ಮಾಡಬೇಕು. ಆವಾಗ ಅವರ ಇಡೀ ಜೀವನವೇ ಅದ್ಭುತವಾಗುತ್ತದೆ. ಕಲಿತ ಶಾಲೆ, ಮಾತೃ ಸಂಸ್ಥೆಯನ್ನು ಯಾವತ್ತು ಮರೆಯಬಾರದು. ಅದಲ್ಲದೆ ತಮ್ಮಗಿಂತ ಬುದ್ಧಿವಂತ ಗೆಳೆಯರ ಜೊತೆ ಗೆಳೆತನ ಮಾಡಬೇಕು. ಹಾಗೆಯೇ ಯಾವುದೇ ದುಶ್ಚಟ, ದುರ್ಗುಣಗಳಿಂದ ದೂರವಿರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಡಾ.ಪದ್ಮಾಸಿಂಹ ಅವರು ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಪ್ರಯತ್ನ ಅತ್ಯಂತ ಮುಖ್ಯವಾಗಿದೆ. ಮಕ್ಕಳು ಯಾವಾಗಲೂ ಆರೋಗ್ಯವಂತರಾಗಿರಲು ಒಳ್ಳೆಯ ನ್ಯೂಟ್ರೇಶನ್ ಆಹಾರ ಸೇವನೆ ಮಾಡಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮವು ನಿರಂಜನ ಮಹಾಸ್ವಾಮಿ ಹಾಗೂ ಮಹಾಲಿಂಗ ಮಹಾಸ್ವಾಮಿ ದಿವ್ಯ ಸಮ್ಮುಖದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಚನ್ನಬಸವ ಘಾಳೆ, ಡಾ. ಸುವರ್ಣಾ, ಶರದ್ ಬಿರಾದಾರ್, ಉದ್ಯಮಿ ವಿಶಾಲ್ ಪಾಟೀಲ್, ಹಾವಗಿರಾವ್ ಮಠಪತಿ, ಸ್ನೇಹಲತಾ ಪೂಜಾರಿ, ಶೇಖರ್ ಬೆಳಗೆ ಹಾಗೂ ಯಸ್ತಾರಾಣಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.