ಬೀದರ್ | ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಯಾಗಲು ಬಿಡುತ್ತಿಲ್ಲ: ಸಚಿವ ರಹೀಮ್ ಖಾನ್

Update: 2024-12-07 11:17 GMT

ಬೀದರ್ : ಕೆಲವರು ದೇಶದಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಯಾಗದಂತೆ ತಡೆಯುತ್ತಿದ್ದಾರೆ. ಸಂವಿಧಾನ ಸಂಪೂರ್ಣವಾಗಿ ಜಾರಿಯಾದಾಗ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಹೇಳಿದ್ದಾರೆ.

ಸಂವಿಧಾನ ಶಿಲ್ಫಿ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿವಿಧ ದಲಿತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಅಂಬೇಡ್ಕರ್ ವೃತ್ತದ ಶೋಷಿತ ಸಮುದಾಯಗಳ ಐಕ್ಯತಾ ದಿನ ಹಾಗೂ ಸಂಗೀತ ನುಡಿನಮನ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಮಾತನಾಡಿದರು.

ಶ್ರೀಮಂತರನ್ನು ಪ್ರಶ್ನಿಸುವ ವ್ಯವಸ್ಥೆ ಕಡಿಮೆ ಆಗಿದೆ. ಬಡವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ. ಕೆಲವು ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ದೇಶದಲ್ಲಿ ಸಂಪೂರ್ಣವಾಗಿ ಸಂವಿಧಾನ ಜಾರಿಯಾಗದಂತೆ ತಡೆಯುತ್ತಿದ್ದಾರೆ. ದೇಶವನ್ನು ಗುಲಾಮಗಿರಿ ಪದ್ದತಿಗೆ ದೂಡುವ ಹುನ್ನಾರ ಹೊಂದಿದ್ದವರಿಂದ ಇಂತಹ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೋರ್ಟ್, ಕಚೇರಿ, ಪೊಲೀಸ್ ಠಾಣೆ, ಆಸ್ಪತ್ರೆ ಇವೆಲ್ಲವು ಬಾಬಾಸಾಹೇಬರ್ ನಮಗೆ ನೀಡಿರುವ ಕೊಡುಗೆಯಾಗಿದ್ದು, ಬಾಬಾಸಾಹೇಬರು ಸಂವಿಧಾನ ಬರೆಯುವ ಪೂರ್ವದಲ್ಲಿ ರಾಜನ ಮಗ ರಾಜನಾಗುವ ಪದ್ಧತಿ ಇತ್ತು ಆದರೆ ಅವರು ಸಂವಿಧಾನ ಬರೆದ ನಂತರ ಒಬ್ಬ ಸಾಮಾನ್ಯ ಬಡವನ ಮಗನೂ ಸಹ ದೇಶದ ದೊಡ್ಡ, ದೊಡ್ಡ ಹುದ್ದೆಯನ್ನು ಏರುವಂತಾಯಿತು ಎಂದರು.

ದೇಶದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಿದ್ದು ನಮ್ಮ ಸಂವಿಧಾನ. ಬಾಬಾಸಾಹೇಬರು ಸಂವಿಧಾನವನ್ನು ಕೇವಲ ಒಂದು ಸಮಾಜಕ್ಕೆ ನೀಡಿಲ್ಲ. ಭಾರತದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕನ್ನು ನೀಡಿದೆ ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News