ಬೀದರ್ | ಆರೋಗ್ಯಪೂರ್ಣ ಸಮಾಜಕ್ಕೆ ಫಾರ್ಮಾಸಿಸ್ಟ್‌ರ ಪಾತ್ರ ಮಹತ್ವದ್ದು: ಸಚಿವ ಖಂಡ್ರೆ
ಬೀದರ್ : ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಫಾರ್ಮಾಸಿಸ್ಟರ ಪಾತ್ರ ಮಹತ್ವದ್ದಾಗಿದೆ ಎಂದು ರಾಜ್ಯದ ಅರಣ್ಯ ಮತ್ತು ಜಿಲ್ಲಾ ಸಚಿವ ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಇಂಡಿಯನ್ ಫಾರ್ಮಾಸಿಸ್ಟ್ ಅಸೋಸಿಯೇಷನ್ ರಾಜ್ಯ ಘಟಕ, ಬೀದರ್ನ ಫಾರ್ಮಾಸಿಸ್ಟ್ ಡಿಸ್ಟ್ರಿಬ್ಯೂಷನ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಜರುಗಿದ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಹಾಗೂ ಫಾರ್ಮಾಸಿಸ್ಟರ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ವೇಳೆ ಫಾರ್ಮಾಸಿಸ್ಟರು ಜನರ ಜೀವ ಉಳಿಸಲು ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು.
ಫಾರ್ಮಾಸಿಸ್ಟರು ಅಖಿಲ ಭಾರತ ಮಟ್ಟದಲ್ಲಿ ಬಲಶಾಲಿ ಸಂಘ ಕಟ್ಟಿಕೊಂಡಿರುವುದು ಶ್ಲಾಘನೀಯ. ಒಗ್ಗಟ್ಟಿನಲ್ಲಿ ಬಲವಿದ್ದು, ಸಂಘಟನೆ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರು ಮಾತನಾಡಿ, ಜಾಗತಿಕ ಮಟ್ಟದ ಫಾರ್ಮಾಸಿಸ್ಟರ ಸೇವೆ ದಿನೇ ದಿನೇ ವಿಸ್ತಾರಗೊಳ್ಳುತ್ತಿದೆ ಎಂದರು.
ಇಂಡಿಯನ್ ಫಾರ್ಮಾಸಿಸ್ಟ್ ಅಸೋಸಿಯೇಷನ್ ರಾಜ್ಯ ಘಟಕದ ಅಧ್ಯಕ್ಷ ರವಿ ಪಾಂಚಾಳ್ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಸುಶೀಲ್ ಸದನ್, ಸಹಾಯಕ ಔಷಧ ನಿಯಂತ್ರಕ ಧನಂಜಯ್ ಹತ್ಪಾಕಿ, ಇಂಡಿಯನ್ ಫಾರ್ಮಾಸಿಸ್ಟ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವೀರೇಂದ್ರ ಶಾಸ್ತ್ರಿ, ಉತ್ಕರ್ಷ್ ಶಾಸ್ತ್ರಿ, ಹರಿಯಾಣದ ವಿನೋದ್ ದಲಾಲ್, ಹಿಮಾಚಲಪ್ರದೇಶದ ಮನೋಜ್ ಶರ್ಮಾ, ನವದೆಹಲಿಯ ಫಿಫೋ ಖಜಾಂಚಿ ಬಲಬೀರ್ ಸಿಂಗ್, ಆಂಧ್ರಪ್ರದೇಶದ ತಿರುಪತಿಯ ಕೆ.ವಿ. ಗೋಪಿನಾಥ, ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ ಸದಸ್ಯ ಎಂ.ಎಸ್. ನಾಗರಾಜ್, ವಿಜಯಪುರದ ರೆಡ್ಕ್ರಾಸ್ ಸೋಸೈಟಿಯ ಅಧ್ಯಕ್ಷ ಚಂದ್ರಶೇಖರ್ ಲೆಂಡಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಕಿರಣ್ ಪಾಟೀಲ್, ಪ್ರಮುಖರಾದ ಪ್ರಕಾಶ್ ಪಾಟೀಲ್, ಪ್ರಭಾಕರ್ ಮೈಲಾಪುರ, ಎಂ.ಡಿ. ಸುಲ್ತಾನ್, ಜಿಶನ್ ಅಹಮ್ಮದ್, ಶಿವಾಜಿ ಮೇತ್ರೆ, ಶ್ರೀನಿವಾಸ್ ಮುಖೇಡಕರ್, ಮಹೇಶ್ ಪಾಟೀಲ್, ಶಿವರಾಜ್ ಚಿದ್ರಿ, ವಿನೋದ್ ಮಾಳಗೆ, ಸುದರ್ಶನ್, ಸುಕನ್ಯಾ, ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು.