ಬೀದರ್ | ʼತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆʼ

Update: 2024-11-29 13:03 GMT

ಬೀದರ್ : ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಸಾಕಷ್ಟು ಪರಿಶ್ರಮ ವಹಿಸಿ ಜಲ ಜೀವನ್ ಮಿಷನ್ ಯೋಜನೆಯಡಿ ಸುಮಾರು 200 ಕೋಟಿ ರೂ. ಅನುದಾನ ತರಲಾಗಿದೆ. ಕೆಲಸ ಕಳಪೆಯಾಗಿ ಮಾಡುತ್ತಿದ್ದು, ಕೂಡಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಶಿಕ್ಷೆ ಎದುರಿಸಲು ಸಿದ್ದರಿರಬೇಕು ಎಂದು ಶಾಸಕ ಪ್ರಭು ಬಿ.ಚವ್ಹಾಣ್‌ ಅಧಿಕಾರಿಗಳಿಗೆ ಎಚ್ಚರಿಸಿದ್ಧಾರೆ.

ಔರಾದ(ಬಿ) ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜೆಜೆಎಂ ಕಾಮಗಾರಿಯ ಬಗ್ಗೆ ಹಿಂದಿನಿಂದಲೂ ನಿರಂತರ ದೂರುಗಳು ಬರುತ್ತಿವೆ. ಕಾಮಗಾರಿ ನಡೆದ ಯಾವ ಗ್ರಾಮದಲ್ಲಿಯೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಾಳಾದ ರಸ್ತೆ ಸರಿಪಡಿಸದೇ ಬಿಟ್ಟಿರುವುದು, ಟ್ಯಾಪ್‌ಗಳು ಮುರಿದು ಬಿದ್ದಿರುವುದು, ಚರಂಡಿಯಲ್ಲಿ ಪೈಪುಗಳನ್ನು ಬಿಟ್ಟಿರುವುದು, ಕಳಪೆ ಮಟ್ಟದ ಸಾಮಗ್ರಿಗಳನ್ನು ಬಳಸಿರುವುದು, ಬಾವಿ ಕೊರೆಯದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಹಾಗಾಗಿ ಕಾಮಗಾರಿ ಪರಿಶೀಲಿಸದೇ ಅಧಿನಕ್ಕೆ ಪಡೆಯಬಾರದೆಂದು ತಿಳಿಸಿದರೂ ಕೆಲವು ಪಿಡಿಓಗಳು ಗುತ್ತಿಗೆದಾರರ ಆಮೀಷಕ್ಕೆ ಒಳಗಾಗಿ ಕಾಮಗಾರಿಯನ್ನು ಪಂಚಾಯತ್ ಅಧೀನಕ್ಕೆ ಪಡೆದಿದ್ದಾರೆ. ಇದರಿಂದ ಮುಂದೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.

ಬಾವಲಗಾಂವ, ನಂದಿ ಬಿಜಲಗಾಂವ ಸೇರಿದಂತೆ ಕೆಲವು ಸರಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರಿಲ್ಲ. ಔರಾದ(ಬಿ) ಮತಕ್ಷೇತ್ರದ ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಕನ್ನಡ ಶಿಕ್ಷಕರನ್ನು ನಿಯೋಜಿಸಬೇಕು. ಸರಕಾರಿ ಶಾಲೆಗಳ ಶಿಕ್ಷಕರು ಸರಿಯಾಗಿ ಶಾಲೆಗೆ ಹೋಗುತ್ತಿಲ್ಲ. ಸಮಯಕ್ಕಿಂತ ಮುಂಚಿತವಾಗಿ ಮನೆಗೆ ಹೋಗುತ್ತಿದ್ದಾರೆ. ಹೀಗಾದರೆ ಜನರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಹೇಗೆ ಕಳುಹಿಸಲು ಸಾಧ್ಯ ? ಶಿಕ್ಷಣದ ಅಭಿವೃದ್ಧಿ ಆಗುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆಗಳನ್ನು ಸುಧಾರಿಸಬೇಕು :

ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಾಗಬೇಕು. ಸಿಸಿ ಟೀವಿಗಳನ್ನು ಅಳವಡಿಸಬೇಕು. ಪ್ರತಿ ಶಾಲೆಯಲ್ಲಿ ಕಂಪೌಂಡ್, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು ಎಂದು ಸೂಚಿಸಿದರು.

ನೇಮಕಾತಿಯಲ್ಲಿ ಅಕ್ರಮ :

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಬ್ರೋಕರ್ಗಳ ಹಾವಳಿ ಹೆಚ್ಚಾಗಿದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಬಹಳಷ್ಟು ಅಕ್ರಮವಾಗಿದೆ. ಅರ್ಜಿದಾರರಿಂದ ಲಕ್ಷಾಂತರ ಹಣವನ್ನು ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಕಚೇರಿಯನ್ನು ಬ್ರೋಕರ್ಗಳ ಅಡ್ಡಾ ಮಾಡಿದ್ದೀರೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಯ ವಿರುದ್ದ ಆಕ್ರೋಶ ಹೊರಹಾಕಿದರು. ಈ ನೇಮಕಾತಿಯನ್ನು ರದ್ದುಪಡಿಸಿ ಪುನಃ ನಡೆಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಆರೋಗ್ಯ, ರೇಷ್ಮೆ, ಅರಣ್ಯ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಲೋಕೋಪಯೋಗಿ, ಜೆಸ್ಕಾಂ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ.ಔರಾದ(ಬಿ), ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಕಮಲನಗರ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News