ಬೀದರ್ | ತಂತ್ರಜ್ಞಾನದ ಬಳಕೆ ಅನಿವಾರ್ಯ: ಬಸವರಾಜ್ ಜಾಬಶಟ್ಟಿ
ಬೀದರ್ : ಇವತ್ತಿನ ಜೀವನ ತಂತ್ರಜ್ಞಾನದ ಮೇಲೆ ನಿಂತಿರುವುದರ ಜೊತೆಗೆ, ತಂತ್ರಜ್ಞಾನದ ವಿದ್ಯೆ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಕಲಿಯಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಕರಾಶಿ ಸಂಸ್ಥೆಯ ಅಧ್ಯಕ್ಷ ಬಸವರಾಜ್ ಜಾಬಶಟ್ಟಿ ಅವರು ಹೇಳಿದ್ದಾರೆ.
ನಗರದ ಕರಾಶಿ ಸಂಸ್ಥೆಯ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಗಣಕಯಂತ್ರ ವಿಜ್ಞಾನ ವಿಭಾಗದಿಂದ ಆಯೋಜನೆಗೊಂಡ ʼಟೆಕ್ನೋಫ್ಯೂಜನ್ ಅಂತರ್ ಕಾಲೇಜು ಸ್ಪರ್ಧೆʼಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಚಿಕ್ಕ-ಚಿಕ್ಕ ಮಕ್ಕಳು ಸಹ ತಂತ್ರಜ್ಞಾನವನ್ನು ಬಹಳ ಸರಳವಾಗಿ ಬಳಕೆ ಮಾಡುತ್ತಾ ಅನೇಕ ವಿಷಯಗಳನ್ನು ಗ್ರಹಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಸಹ ಅನೇಕ ಹೊಸ ಹೊಸ ವಿಷಯಗಳನ್ನು ಇಂದು ಓದುತ್ತಿದ್ದಾರೆ ಜೊತೆಗೆ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂತಹ ಸ್ಪರ್ಧೆಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಸರಕಾರಿ ಕಾಲೇಜು, ಬಿವಿಬಿ, ಗುರುನಾನಕ್, ಸನಸಾಫ್ಟ್ ಕಾಲೇಜು ಸೇರಿದಂತೆ ಒಟ್ಟು 9 ಮಹಾವಿದ್ಯಾಲಯದಿಂದ 81 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಪಾಟೀಲ್, ಜಂಟಿ ಕಾರ್ಯದರ್ಶಿ ಶಿವಾನಂದ್ ಗಾದಗೆ, ಪ್ರಿನ್ಸಿಪಾಲ್ ಪ್ರೋ.ಮಲ್ಲಿಕಾರ್ಜುನ್ ಹಂಗರಗೆ, ಗಣಕಯಂತ್ರ ವಿಜ್ಞಾನ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ದೊಡ್ಡಮನಿ, ಸಹಾಯಕ ಪ್ರಾಧ್ಯಾಪಕ ಅಶೋಕ್ ಹುಡೇದ್, ಐಕ್ಯೂಎಸಿ ಸಂಯೋಜಕ ಡಾ.ರಾಜಮೋಹನ್ ಪರದೇಶಿ ಸೇರಿದಂತೆ ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗಣಕಯಂತ್ರ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಿ.ವಿ.ರವಿಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು, ಉಪ ಪ್ರಿನ್ಸಿಪಾಲ್ ಅನಿಲಕುಮಾರ್ ಚಿಕ್ಕಮಣೂರ್ ಅವರು ವಂದಿಸಿದರು.