ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ?: ಸಚಿವ ಈಶ್ವರ್ ಖಂಡ್ರೆ

Update: 2024-04-23 14:47 GMT

ಬೀದರ್: ‘ಚುನಾವಣಾ ನೀತಿ ಸಂಹಿತೆಯ ನಡುವೆಯೂ ಚುನಾವಣೆ ಆಯೋಗದ ಅನುಮತಿ ಪಡೆದು ರಾಜ್ಯದ ಹಿತ ಕಾಯುತ್ತಿರುವ ಮೋದಿ ಸರಕಾರ’ ಎಂದು ರಾಜ್ಯ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸರಕಾರಕ್ಕೆ ಬರ ಪರಿಹಾರ ನೀಡುವಂತೆ ನಿರ್ದೇಶಿಸಲು ಕೋರಿ ರಾಜ್ಯ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕ, ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ಮೋದಿ ಸರಕಾರ ಹೇಳಿದೆ. ತನಗಾಗಿರುವ ಮುಖಭಂಗ ಮರೆ ಮಾಚಲು ಇಂತಹ ಪ್ರಚಾರ ಮಾಡುವ ಬಿಜೆಪಿ ಮತ್ತು ಸಂಸದ ಭಗವಂತ ಖೂಬಾಗೆ ಕಿಂಚಿತ್ತೂ ನಾಚಿಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಪರಿಹಾರ ಬಿಡುಗಡೆ ಮಾಡದೆ ಕರ್ನಾಟಕದ ಜನತೆಗೆ ಕೇಂದ್ರ ಸರಕಾರ ದ್ರೋಹ ಬಗೆದಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಮನಗರದಲ್ಲಿ ರೋಡ್ ಶೋ ವೇಳೆ ರಾಜ್ಯ ಸರಕಾರ ಬರ ಪರಿಹಾರಕ್ಕೆ ತಡವಾಗಿ ಮನವಿ ಸಲ್ಲಿಸಿತು, ಈಗ ಚುನಾವಣೆ ನೀತಿ ಸಂಹಿತೆ ಅಡ್ಡ ಬಂದಿದೆ ಎಂದು ಹಸಿ ಸುಳ್ಳು ಹೇಳಿದ್ದರು. ನಮ್ಮ ಸರಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಬಳಿಕ ಮೊದಲ ನ್ಯಾಯ ಸಿಕ್ಕಿದೆ, ಬಿಜೆಪಿಗೆ ಮುಖಭಂಗ ಆಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

ನಮ್ಮ ತೆರಿಗೆ ನಮ್ಮ ಹಕ್ಕು ವಿಚಾರದಲ್ಲೂ ರಾಜ್ಯಕ್ಕೆ ಶೀಘ್ರ ನ್ಯಾಯ ಸಿಗಲಿದೆ. ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳ ಅಭೂತಪೂರ್ವ ಯಶಸ್ಸಿನಿಂದ ಬಿಜೆಪಿ ಭಯಭೀತವಾಗಿದೆ. ಕೇಂದ್ರದಿಂದ ನ್ಯಾಯ ಸಮ್ಮತವಾಗಿ ನೀಡಬೇಕಾದ ಬರ ಪರಿಹಾರದ ಹಣ ನೀಡದಿದ್ದರೂ ಸಿದ್ದರಾಮಯ್ಯ ಸರಕಾರ ಅತ್ಯುತ್ತಮವಾಗಿ ಬರ ನಿರ್ವಹಣೆ ಮಾಡುತ್ತಿರುವುದನ್ನು ನೋಡಿ ಗಾಬರಿಯಾಗಿದ್ದಾರೆ, ರಾಜ್ಯದ ಹಣಕಾಸು ಸ್ಥಿತಿಯನ್ನು ಹಾಳು ಮಾಡುವ ಅವರ ಪ್ರಯತ್ನ ಫಲ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಕೇಂದ್ರ ಸರಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, ರಾಜ್ಯದ ಜನತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News