ಅಕ್ರಮ ಕಲ್ಲು ಗಣಿಗಾರಿಕೆ | ಕೇಂದ್ರ ಸಚಿವ ಭಗವಂತ ಖೂಬಾಗೆ 25 ಕೋಟಿ ರೂ.ದಂಡ : ಸಚಿವ ಈಶ್ವರ್ ಖಂಡ್ರೆ

Update: 2024-05-03 17:08 GMT

ಬೀದರ್: ಕೇಂದ್ರ ಸಚಿವ ಭಗವಂತ ಖೂಬಾ ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ವಂಚಕ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಲೂಟಿ ಮಾಡಿದ್ದು, ಒಬ್ಬ ಕೇಂದ್ರ ಸಚಿವರಾಗಿ ಸರಕಾರಕ್ಕೆ ಸುಮಾರು 25 ಕೋಟಿ ರೂ. ವಂಚನೆ ಮಾಡಿದ್ದಾರೆ. ಇದನ್ನು ತಮ್ಮ ಚುನಾವಣಾ ಅಫಿಡವಿಟ್‍ನಲ್ಲಿ ತಪ್ಪು ಮಾಹಿತಿ ನೀಡಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಪುತ್ರ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ವಕೀಲನೇ ಅಲ್ಲ, ಬಾರ್ ಅಸೋಸಿಯೇಷನ್‍ನಲ್ಲಿ ನೋಂದಣಿ ಮಾಡಿಸಿಲ್ಲ. ತಪ್ಪು ಅಫಿಡವಿಟ್ ಕೊಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಖೂಬಾ ಹೇಳಿಕೆ ನೀಡುತ್ತಿದ್ದು, ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ದೂರಿದರು.

ಸುಳ್ಳು ಹೇಳುವುದು ಬಿಜೆಪಿಯ ಜಾಯಮಾನ. ಬಿಜೆಪಿ ಅಂದರೆ ‘ಭಾರತೀಯ ಝೂಟಾ ಪಾರ್ಟಿ’. ಅದು ಸುಳ್ಳಿನ ವಿಶ್ವ ವಿದ್ಯಾಲಯ. ಅಲ್ಲಿ ಪದವಿ ಪಡೆದಿರುವ ಭಗವಂತ ಖೂಬಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ. ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಮತ್ತು ನನ್ನ ಪುತ್ರನ ಪದವಿಯ ಬಗ್ಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರು ಮಾಡುತ್ತಿರುವ ಯಾವುದೇ ಆರೋಪಕ್ಕೆ ಅವರ ಬಳಿ ಪುರಾವೆ ಇಲ್ಲ. ಆಧಾರ ರಹಿತ ಆರೋಪಗಳಿಗೆ ಯಾವುದೇ ಬೆಲೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ಹತ್ತು ವರ್ಷದಿಂದ ಸಂಸತ್ ಸದಸ್ಯರಾಗಿ, ಸಚಿವರಾಗಿರುವ ಖೂಬಾಗೆ ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ನನ್ನ ಪುತ್ರ ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಮಾಡಿಕೊಂಡಿರುವ ಪ್ರಮಾಣ ಪತ್ರ ಬಿಡುಗಡೆ ಮಾಡಿದ ಬಳಿಕವೂ, ಸೋಲಿನ ಭೀತಿ ಆವರಿಸಿರುವ ಕಾರಣ ಖೂಬಾ ಸುಳ್ಳು ಆರೋಪ ಮಾಡುವುದನ್ನು ಮುಂದುವರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಖೂಬಾ 25 ಕೋಟಿ ರೂ.ದಂಡ ಕಟ್ಟಬೇಕು ಎಂದರೆ ಇವರು ನೂರಾರು ಕೋಟಿ ರೂ.ಕಲ್ಲು ಲೂಟಿ ಮಾಡಿದ್ದಾರೆ. 2 ಎಕರೆಗೆ ಅನುಮತಿ ಪಡೆದು 8 ಎಕರೆಯಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಸರಕಾರಕ್ಕೇ ಮೋಸ ಮಾಡುವ ಇವರು ಜನರಿಗೆ ವಂಚನೆ ಮಾಡದೇ ಇರುತ್ತಾರೆಯೇ? ಹೀಗೆ ಇನ್ನೂ ಯಾವ ಯಾವ ವ್ಯವಹಾರದಲ್ಲಿ ರಾಜ್ಯದ ಸಂಪತ್ತನ್ನು ಎಷ್ಟು ಲೂಟಿ ಮಾಡಿದ್ದಾರೋ ಗೊತ್ತಿಲ್ಲ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News