‘ಜಾತಿ ನಿಂದನೆ’ ಆರೋಪ: ಕ್ಷಮೆಯಾಚಿಸಿದ ನಟ ಉಪೇಂದ್ರ

Update: 2023-08-14 05:58 GMT

ನಟ ಉಪೇಂದ್ರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದಡಿ ನಟ, ನಿರ್ದೇಶಕ ಉಪೇಂದ್ರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. 

ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬುವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಾಗಿದ್ದು, ಇತ್ತೀಚಿಗೆ ನಟ ಉಪೇಂದ್ರ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯ ನೇರಪ್ರಸಾರದಲ್ಲಿ ಮಾತನಾಡುತ್ತಾ, ‘ಊರು ಎಂದ ಮೇಲೆ ಹೊಲಗೇರಿ ಇರುತ್ತದೆ’ ಎಂಬ ಹೇಳಿಕೆ ನೀಡಿದ್ದರು. ಇದರಿಂದ ದಲಿತ ಸಮುದಾಯದ ಕುರಿತು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ನಟ ಉಪೇಂದ್ರ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ತಕ್ಷಣ ಎಚ್ಚೆತ್ತ ಉಪೇಂದ್ರ ವಿಡಿಯೋ ಡಿಲೀಟ್ ಮಾಡಿ, ಕ್ಷಮೆ ಯಾಚಿಸಿದ್ದು, ‘ವಿಡಿಯೋದಲ್ಲಿ ಬಾಯ್ತಪ್ಪಿ ಒಂದು ಗಾದೆ ಮಾತು ಬಳಸಿದ್ದೆ. ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡುಬಂದಿದೆ. ತಕ್ಷಣವೇ ಆ ಲೈವ್ ವಿಡಿಯೋವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ನನ್ನ ಮಾತಿಗೆ ಕ್ಷಮೆ ಇರಲಿ’ ಎಂದು ಹೇಳಿದ್ದಾರೆ.

‘ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ, ನನಗೆ ಹುಚ್ಚೇ? ಅದಕ್ಕೆ ಕಾರಣವಾದರೂ ಏನು? ಅದರಿಂದ ನನಗೆ ಸಿಗುವ ಲಾಭವಾದರೂ ಏನು? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ? ಯಾಕೆ ಇಷ್ಟೊಂದು ದ್ವೇಷ’ ಎಂದು ನಟ ಉಪೇಂದ್ರ ಬರೆದುಕೊಂಡಿದ್ದಾರೆ.

‘ಕನ್ನಡ ಚಿತ್ರರಂಗದಲ್ಲಿ ಬಹಳ ಬುದ್ಧಿವಂತ ಎಂದು ಬಿಂಬಿಸಿಕೊಂಡಿರುವ ನಟ ಉಪೇಂದ್ರ ಅವರು ಜಾತಿ ನಿಂದನೆ ಹೇಳಿಕೆ ನೀಡಿದ್ದು, ಅವರ ಮಾತಿನಿಂದ ಶೋಷಿತ ದಲಿತ ಸಮುದಾಯಗಳಿಗೆ ನೋವುಂಟಾಗಿದೆ. ಈ ಹೇಳಿಕೆಯು ಇತರರಿಗೂ ಸಹ ಅಸ್ಪøಶ್ಯತೆ ಆಚರಣೆಗಳಿಗೆ ಪ್ರೇರಣೆಯಾಗಿ ಜಾತಿ ತಾರತಮ್ಯವಾಗುತ್ತದೆ. ಆದ್ದರಿಂದ ಉಪೇಂದ್ರ ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯ ಆನೇಕಲ್ ತಾಲೂಕು ಘಟಕದ ಸದಸ್ಯರು ಅತ್ತಿಬೆಲೆ ಪೊಲೀಸ್ ಠಾಣೆಗೆ ಮನವಿ ಪತ್ರ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News